ಕೋಟ, ನ.23: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಸಾರಥ್ಯದಲ್ಲಿ ನಡೆಯುವ ಉಡುಪಿ ಜಿಲ್ಲಾ 16ನೇ ಸಾಹಿತ್ಯ ಸಮ್ಮೇಳನ ಅನುಸಂಧಾನ-2023 (ಭಾಷೆಗೂ ಮೀರಿದ ಭಾವನೆ) ಅಧ್ಯಕ್ಷರಾಗಿ ಸಾಹಿತಿ-ಸಂಶೋಧಕ ಬಾಬು ಶಿವ ಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ. ಹೋಟೆಲ್ ಉದ್ಯಮಿಯಾಗಿರುವ ಬಾಬು ಶಿವ ಪೂಜಾರಿ ಅವರು ವೇದ, ಆಧುನಿಕ ಸಾಹಿತ್ಯ, ಬೌದ್ಧ, ಜೈನ, ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮ ಗ್ರಂಥಗಳನ್ನು ಆಳವಾಗಿ ಅಭ್ಯಸಿಸಿದ್ದಾರೆ. ನಾರಾಯಣ ಗುರುಗಳು ಆದರ್ಶ, ನಾರಾಯಣ ಗುರು ವಿಜಯ ದರ್ಶನ, ಅನುಸಂಧಾನ, ಹಗ್ಗಿನ ಹನಿ ಮುಂತಾದವು ಇವರ ಕೃತಿಗಳು. ಶ್ರೀಕೃಷ್ಣ ದೇವರಾಯ, ಕೋಟಿ ಚೆನ್ನಯ್ಯ, ತುಳು ಸಂಸ್ಕೃತಿ, ಕಾಂತಬಾರೆ ಬೂದಬಾರೆ, ಸಿರಿ, ನಾಗಾರಾಧನೆ, ಭೂತಾರಾಧನೆ ಮತ್ತು ತುಳುನಾಡಿನ ಗರಡಿಗಳ ಬಗ್ಗೆ ಸಂಶೋಧನಾತ್ಮಕ ಪ್ರೌಢ ಲೇಖನಗಳನ್ನು ಪ್ರಕಟಿಸಿದ್ದಾರೆ. ‘ನಾರಾಯಣ ಗುರು ವಿಜಯ ದರ್ಶನ’ವು ಆಧ್ಯಾತ್ಮ ಮತ್ತು ಸಾಮಾಜಿಕ ನೆಲೆಯಲ್ಲಿ ನೆಲದ ಸಂಕಟ ಮತ್ತು ಆಶೋತ್ತರಗಳನ್ನು ತೆರೆದಿಟ್ಟ ಕೃತಿ.
ಕೋಟದ ವಿವೇಕ ವಿದ್ಯಾಲಯದ ಆವರಣದಲ್ಲಿ ಡಿಸೆಂಬರ್ 5 ಮತ್ತು 6 ರಂದು ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯಲಿದ್ದು ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲೆಯ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಹಾಗೂ ನರೇಂದ್ರ ಕುಮಾರ್ ಕೋಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.