Tuesday, January 21, 2025
Tuesday, January 21, 2025

ಸಮುದಾಯದ ಸಹಭಾಗಿತ್ವದೊಂದಿಗೆ ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮಗಳನ್ನಾಗಿಸಬೇಕು: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಸಮುದಾಯದ ಸಹಭಾಗಿತ್ವದೊಂದಿಗೆ ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮಗಳನ್ನಾಗಿಸಬೇಕು: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

Date:

ಉಡುಪಿ, ನ.22: ಗ್ರಾಮಗಳಲ್ಲಿ ಸಮುದಾಯದ ಸಹಭಾಗಿತ್ವದೊಂದಿಗೆ ಅಲ್ಲಿನ ಜನರ ಮನವೊಲಿಸಿ, ತಂಬಾಕು ಉತ್ಪನ್ನಗಳ ಬಳಕೆ ಹಾಗೂ ಮಾರಾಟವನ್ನು ನಿಷೇಧಿಸುವುದರೊಂದಿಗೆ ತಂಬಾಕು ಮುಕ್ತ ಗ್ರಾಮವನ್ನಾಗಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಬುಧವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಎರಡನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಂಬಾಕು ಉತ್ಪನ್ನಗಳ ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಮಾರಕ ರೋಗಗಳಾದ ಕ್ಯಾನ್ಸರ್, ಹೃದಯ ಸಂಬಂಧಿತ ರೋಗ ಸೇರಿದಂತೆ ಮತ್ತಿತರ ರೋಗಗಳು ಉಂಟಾಗುತ್ತವೆ. ಇಂತಹ ಉತ್ಪನ್ನಗಳಿಂದ ಪ್ರತಿಯೊಬ್ಬರೂ ದೂರ ಇರಬೇಕು. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು. ಜಿಲ್ಲೆಯಲ್ಲಿ ಈಗಾಗಲೇ ಉಡುಪಿ ತಾಲೂಕಿನ ಕೋಡಿಬೆಂಗ್ರೆ ಗ್ರಾಮವನ್ನು ತಂಬಾಕು ಮುಕ್ತ ಗ್ರಾಮವಾಗಿ ಘೋಷಿಸಲಾಗಿದೆ. ಇದರಿಂದ ಅಲ್ಲಿನ ಸ್ಥಳೀಯ ಜನರಿಗೆ ಆಗಿರುವ ಲಾಭಗಳನ್ನು ಇತರೆ ಗ್ರಾಮದವರಿಗೆ ತಿಳಿಸಿ, ಅವರುಗಳು ತಂಬಾಕು ಉತ್ಪನ್ನಗಳಿಂದ ದೂರ ಇರುವ ಹಾಗೆ ಉತ್ತೇಜಿಸುವ ಕೆಲಸವಾಗಬೇಕು ಎಂದ ಅವರು, ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮವನ್ನು ಸಹ ತಂಬಾಕು ಮುಕ್ತವನ್ನಾಗಿ ಘೋಷಿಸಲು ಇರುವ ಎಲ್ಲಾ ಅರ್ಹತೆಗಳನ್ನು ಹೊಂದಿದೆ. ಸರಕಾರದ ಮಾನದಂಡದನ್ವಯ ತಂಬಾಕು ಮುಕ್ತ ಗ್ರಾಮ ಎಂದು ಶೀಘ್ರದಲ್ಲಿ ಘೋಷಿಸಲಾಗುವುದು ಎಂದರು. ಜಿಲ್ಲೆಯಲ್ಲಿರುವ ಬೀಡಿ ಕಟ್ಟುವ ಕಾರ್ಮಿಕರುಗಳಿಗೆ ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ, ಅವರು ಇತರೆ ಉದ್ಯೋಗಗಳನ್ನು ಕೈಗೊಳ್ಳಲು ತರಬೇತಿ ನೀಡಬೇಕು ಎಂದ ಅವರು, ಉಡುಪಿ ತಾಲೂಕಿನ ಅಲೆವೂರಿನ 75 ಬೀಡಿ ಕಾರ್ಮಿಕರಲ್ಲಿ ಈಗಾಗಲೇ ಬೀಡಿ ಕಟ್ಟುವ ಉದ್ಯೋಗವನ್ನು ಬಿಟ್ಟು ಇತರೆ ಉದ್ಯೋಗವನ್ನು ಮಾಡಲು ಸಂಜೀವಿನಿ ಸ್ವ-ಸಹಾಯ ಸಂಘದ ಸದಸ್ಯರುಗಳಾಗಿ 42 ಜನ ನೋಂದಣಿಯಾಗಿದ್ದಾರೆ. ಇವರುಗಳಿಗೆ ಗ್ರಾಮ ಪಂಚಾಯತಿಯ ಸಹಯೋಗದೊಂದಿಗೆ ಉದ್ಯೋಗ ತರಬೇತಿ ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದರು.

ಬಹುಮಹಡಿಗಳ ವಸತಿ ಸಮುಚ್ಛಯಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮುಕ್ತ ವಲಯವೆಂದು ಘೋಷಿಸಲು ಅಲ್ಲಿನ ಜನರಿಗೆ ಮನವೊಲಿಸಿ ಎಂದ ಅವರು, ಕುಂದಾಪುರ ತಾಲೂಕಿನ ‘ಇಂಪಿರಿಯಲ್ ರೆಸಿಡೆನ್ಸಿ’ ಬಹುಮಹಡಿ ವಸತಿ ಸಮುಚ್ಛಯವನ್ನು ತಂಬಾಕು ಮುಕ್ತ ಪ್ರದೇಶವಾಗಿ ಶೀಘ್ರದಲ್ಲಿಯೇ ಘೋಷಿಸಲಾಗುವುದು ಎಂದರು. ಜಿಲ್ಲೆಯಲ್ಲಿ ತಂಬಾಕು ವ್ಯಸನ ಮುಕ್ತ ಕಾರ್ಯಕ್ರಮದಡಿಯಲ್ಲಿ 1764 ಜನರನ್ನು ಸಮಾಲೋಚನೆಗೆ ಒಳಪಡಿಸಿ, ಅವರುಗಳಲ್ಲಿ 671 ಜನರಿಗೆ ಆಪ್ತ ಸಮಾಲೋಚನೆ ಪಡೆದರೆ, 1093 ಜನ ಆಪ್ತ ಸಮಾಲೋಚನೆ ಹಾಗೂ ಫಾರ್ಮಾಕೋಥೆರಪಿ ಯನ್ನು ಪಡೆದರೆ, 107 ಜನರು ತಂಬಾಕು ಉತ್ಪನ್ನಗಳಿಂದ ದೂರು ಉಳಿಯಲು ಇಚ್ಛಿಸಿದ್ದಾರೆ ಎಂದರು. ಜಿಲ್ಲೆಯ 784 ಶಾಲೆಯಲ್ಲೂ ತಂಬಾಕು ಮುಕ್ತ ವಲಯಗಳೆಂದು ಫಲಕಗಳನ್ನು ಅಳವಡಿಸಲಾಗಿದೆ. ಶಾಲೆಯ 100 ಮೀ. ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದೆ ಎಂದ ಅವರು ಅಲ್ಲದೇ 18 ವರ್ಷದೊಳಗಿನವರಿಗೆ ಬೀಡಿ, ಸಿಗರೇಟ್ ಗಳನ್ನು ಮಾರಾಟ ಮಾಡುವ ಹಾಗಿಲ್ಲ. ಒಂದೊಮ್ಮೆ ಮಾರಾಟ ಮಾಡುವುದು ಕಂಡುಬಂದಲ್ಲಿ ಅವರುಗಳ ಮೇಲೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದರು. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಕೋಟ್ಪಾ ನಿಯಂತ್ರಣ ತನಿಖಾ ದಳ 297 ಪ್ರಕರಣಗಳಲ್ಲಿ 42,300 ರೂ. ದಂಡವನ್ನು ವಿಧಿಸಲಾಗಿದೆ ಎಂದ ಅವರು, ಕೋಟ್ಪಾ ಕಾಯಿದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಮುಂದಾಗಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ ಗಢಾದ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಯಾ: ಗ್ರಾಮೀಣ ಕ್ರೀಡಾಕೂಟ

ಕಾರ್ಕಳ, ಜ.20: ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ಮೈ...

ಕೆ.ಎಂ.ಸಿ ಮಣಿಪಾಲ: ಕಾರ್ಪೊರೇಟ್ ಕ್ರಿಕೆಟ್ ಲೀಗ್ 2025 ಸಂಪನ್ನ

ಮಣಿಪಾಲ, ಜ.20: ಕಾರ್ಪೊರೇಟ್ ಸಂಸ್ಥೆಗಳು, ಬ್ಯಾಂಕ್‌ಗಳು, ವೈದ್ಯಕೀಯ ಸಂಘಗಳು, ಆಸ್ಪತ್ರೆಗಳು ಮತ್ತು...

‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಚುನಾವಣಾ ಆಯೋಗವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜ.20: ಜನರ ಶಕ್ತಿಯನ್ನು ಬಲಪಡಿಸಲು ತಂತ್ರಜ್ಞಾನದ ಶಕ್ತಿಯನ್ನು ಚುನಾವಣಾ ಆಯೋಗ...

ವೈವಾಹಿಕ ಜೀವನಕ್ಕೆ ಕಾಲಿಟ್ಟ ನೀರಜ್ ಚೋಪ್ರಾ

ಯು.ಬಿ.ಎನ್.ಡಿ., ಜ.20: ಪ್ರಸಿದ್ಧ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವೈವಾಹಿಕ ಜೀವನಕ್ಕೆ...
error: Content is protected !!