ಬ್ರಹ್ಮಾವರ, ನ. 3: ಕರ್ನಾಟಕ ಸಂಭ್ರಮ 50ರ ಪ್ರಯುಕ್ತ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಧ್ಯೇಯವಾಕ್ಯದಡಿ ಬಾರ್ಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಪ್ರಾಂಶುಪಾಲರಾದ ಡಾ. ರಮೇಶ್ ಆಚಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಐ.ಕ್ಯೂ.ಎ.ಸಿ ಸಂಚಾಲಕರಾದ ವಿದ್ಯಾ ಪಿ., ಶೈಕ್ಷಣಿಕ ಮುಖ್ಯ ಸಲಹೆಗಾರರಾದ ಶೋಭಾ ಆರ್., ವಿದ್ಯಾರ್ಥಿ ಕ್ಷೇಮಾಧಿಕಾರಿಯಾದ ಹರೀಶ್ ಸಿ. ಕೆ ಉಪಸ್ಥಿತರಿದ್ದರು.
ಧ್ವಜಾರೋಹಣ ಮತ್ತು ಪುಷ್ಪಾರ್ಚನೆಯನ್ನು ನೆರವೇರಿಸಿದ ಪ್ರಾಂಶುಪಾಲರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ನಾಡು ನುಡಿ ವಿಷಯದಲ್ಲಿ ಕನ್ನಡಿಗರ ಜವಾಬ್ದಾರಿಯನ್ನು ತಿಳಿಹೇಳಿದರು. ಸಮೂಹ ಗೀತ ಗಾಯನ ತಂಡದವರು ರಾಷ್ಟ್ರಗೀತೆ, ನಾಡಗೀತೆ ಹಾಡಿದರು. ನುಡಿ ನಮನದ ಕಾರ್ಯಕ್ರಮದ ಭಾಗವಾಗಿ ಕನ್ನಡದ ಹೆಸರಾಂತ ಕವಿಗಳ ಐದು ಕನ್ನಡ ಗೀತೆಗಳನ್ನು ಹಾಡುವ ಮೂಲಕ ಕನ್ನಡ-ಕನ್ನಡಿಗ-ಕರ್ನಾಟಕದ ಅರಿವನ್ನು ನೆರೆದವರಲ್ಲಿ ಮೂಡಿಸಿದರು. ಗಣಿತಶಾಸ್ತ್ರ ಉಪನ್ಯಾಸಕರಾದ ಗಂಗಾಧರ ಡಿ ಅವರು ಕನ್ನಡ ಭಾಷೆ ಮತ್ತು ಸಾಹಿತ್ಯದ ವೈಶಿಷ್ಟ್ಯತೆಗಳ ಬಗ್ಗೆ ಮಾತನಾಡಿದರು. ಕನ್ನಡ ವಿಭಾಗ ಮುಖ್ಯಸ್ಥರಾದ ಮಮತ ಎಂ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಬೋಧಕ-ಬೋಧಕೇತರರು, ವಿದ್ಯಾರ್ಥಿಗಳು ಭಾಗವಹಿಸಿದರು.