Sunday, January 19, 2025
Sunday, January 19, 2025

ಅನುದಾನ ಪೂರ್ಣವಾಗಿ ಅನುಷ್ಠಾನಗೊಳಿಸಿ: ಡಾ. ಎಂ.ಟಿ. ರೇಜು

ಅನುದಾನ ಪೂರ್ಣವಾಗಿ ಅನುಷ್ಠಾನಗೊಳಿಸಿ: ಡಾ. ಎಂ.ಟಿ. ರೇಜು

Date:

ಉಡುಪಿ, ನ.2: ಸರಕಾರ ಜನಸಾಮಾನ್ಯರ ಶ್ರೇಯೋಭಿವೃದ್ಧಿಗಾಗಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಜಿಲ್ಲೆಗೆ ನೀಡಿರುವ ಅನುದಾನವನ್ನು ಸಮರ್ಪಕವಾಗಿ ಪೂರ್ಣ ಪ್ರಮಾಣದಲ್ಲಿ ಬಳಸಿ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎಂ.ಟಿ ರೇಜು ಹೇಳಿದರು. ಅವರು ಗುರುವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸ್ತುತ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವ ಅಭಿವೃದ್ಧಿ ಕಾರ್ಯಗಳು, ಯೋಜನೆಗಳು ಹಾಗೂ ಕಾರ್ಯಕ್ರಮಗಳ ಕ್ರಿಯಾ ಯೋಜನೆ ರೂಪಿಸಿ ಜಿಲ್ಲೆಗೆ ನೀಡಿರುವ ಗುರಿ ಮತ್ತು ಸಾಧನೆಗಳನ್ನು ನಿಗಧಿತ ಕಾಲಾವಧಿಯೊಳಗೆ ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಅದರ ಲಾಭವನ್ನು ಜನಸಾಮಾನ್ಯರಿಗೆ ಲಭಿಸುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರಸಕ್ತ ಸಾಲಿನ ಕ್ರಿಯಾಯೋಜನೆಯನ್ನು ಅನುಷ್ಠಾನಗೊಳಿಸಲು ಯಾವುದೇ ಕಾನೂನಾತ್ಮಕ ಸೇರಿದಂತೆ ಮತ್ತಿತರ ತೊಂದರೆಗಳಿದ್ದಲ್ಲಿ ನಮ್ಮ ಅಥವಾ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅವುಗಳನ್ನು ಬಗೆಹರಿಸಿಕೊಂಡು ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.

ಜಿಲ್ಲೆಯ ಪ್ರವಾಸೋದ್ಯಮ ತಾಣಗಳ ಮೂಲಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳಿಗೆ 2016-17. 2018-19 ನೇ ಸಾಲಿನಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದರೂ ಅವುಗಳ ಅನುಷ್ಠಾನ ಈವರೆಗೆ ಆಗಿರುವುದಿಲ್ಲ. ಈ ರೀತಿ ಆದಲ್ಲಿ ಮುಂದಿನ ದಿನಗಳಲ್ಲಿ ಸರಕಾರ ಹೊಸ ಅನುದಾನ ಬಿಡುಗಡೆ ಮಾಡುವ ಸಾಧ್ಯತೆಗಳು ಕಡಿಮೆ ಇರುತ್ತದೆ. ಅಧಿಕಾರಿಗಳು ಕಾಮಗಾರಿಗಳ ಅನುಷ್ಠಾನಗಳನ್ನು ಪೂರ್ಣಗೊಳಿಸಲು ಯಾವುದೇ ರೀತಿಯ ಸಮಸ್ಯೆಗಳಿದ್ದರೆ ಅವುಗಳನ್ನು ಬಗೆಹರಿಸಿ, ಆದ್ಯತೆಯ ಮೇಲೆ ಕಾಮಗಾರಿ ಕೈಗೊಂಡು ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕು ಎಂದರು. ಶಿಕ್ಷಣ ಇಲಾಖೆಯಲ್ಲಿ ಹೊಸದಾಗಿ ಶಿಕ್ಷಕರ ನೇಮಕಾತಿಗಳ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅವರುಗಳಿಗೆ ಕರ್ತವ್ಯಕ್ಕೆ ಹಾಜರಾಗಲು ದಾಖಲೆಗಳ ಪರಿಶೀಲನೆ ಪ್ರಕ್ರಿಯೆಗಳು ವಿಳಂಬದಿಂದಾಗಿ ನೇಮಕಗೊಳ್ಳಲು ಸಾಧ್ಯವಾಗಿರುವುದಿಲ್ಲ. ಸಿಂಧುತ್ವ ಪ್ರಮಾಣ ಪತ್ರಗಳನ್ನು ಸಂಬಂಧಿಸಿದ ಇಲಾಖೆಗಳು ಶೀಘ್ರದಲ್ಲಿಯೇ ನಿಯಮಾನುಸಾರ ನೀಡಬೇಕು ಎಂದ ಅವರು, ಶಾಲಾ ಕಟ್ಟಡಗಳ ದುರಸ್ಥಿ ಕಾರ್ಯಗಳನ್ನು ನಿಗಧಿತ ಕಾಲಾವಧಿಯೊಳಗೆ ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದರು.

ಅನ್ನಭಾಗ್ಯ ಯೋಜನೆಯಡಿ ರಾಜ್ಯದ ವತಿಯಿಂದ ನೀಡುವ 5 ಕೆ.ಜಿ ಅಕ್ಕಿ ವಿತರಣೆ ಬಗ್ಗೆ ಸಮರ್ಪಕವಾಗಿ ಮಾಹಿತಿ ಪಡೆದು ಮಾತನಾಡಿದ ಅವರು, ಹೊಸದಾಗಿ ರೇಷನ್ ಕಾರ್ಡ್ಗಳನ್ನು ಪಡೆದ ಹೆಚ್ಚಿನ ಜನರಿಗೆ ಅಕ್ಕಿ ವಿತರಣೆ ಆಗುತ್ತಿಲ್ಲ ಎಂಬ ಬಗ್ಗೆ ದೂರುಗಳು ಬರುತ್ತಿವೆ. ಇವುಗಳಲ್ಲಿ ಅರ್ಹರಿದ್ದು, ಇದರ ಪ್ರಯೋಜನದಿಂದ ವಂಚಿತರಾಗುವ ಸಾಧ್ಯತೆ ಇದೆ. ಇವರುಗಳಿಗೆ ಅಕ್ಕಿ ವಿತರಣೆ ಆಗುವಂತೆ ಕಾರ್ಯಪ್ರವೃತ್ತರಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ ಸೆಪ್ಟಂಬರ್ ಮಾಹೆಯ ಅಂತ್ಯಕ್ಕೆ 2,13,658, ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು, 1,77,910 ಫಲಾನುಭವಿಗಳಿಗೆ ಹಣವನ್ನು ಅವರುಗಳ ಬ್ಯಾಂಕ್ ಖಾತೆಗೆ ಜಮಾ ಮಾಡಿ, ಶೇ. 88 ರಷ್ಟು ಸಾಧನೆ ಮಾಡಲಾಗಿದ್ದು, ಅಕ್ಟೋಬರ್ ಮಾಹೆಯಲ್ಲಿ ಶೇ. 85 ರಷ್ಟು ಪ್ರಗತಿ ಸಾಧಿಸಲಾಗಿರುತ್ತದೆ. 30,000 ಕ್ಕೂ ಹೆಚ್ಚು ಜನರಿಗೆ ಈ ಯೋಜನೆ ತಲುಪಿರುವುದಿಲ್ಲ. ತಾಂತ್ರಿಕ ನೂನ್ಯತೆಗಳನ್ನು ಆದಷ್ಟು ಶೀಘ್ರದಲ್ಲಿ ಬಗೆಹರಿಸಬೇಕು.

ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಆಗಿರುವ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಮುಂದಾಗಬೇಕು ಎಂದರು. ಕೃಷಿ ಹಾಗೂ ತೋಟಗಾರಿಕೆಗೆ ಸಂಬಂಧಿಸಿದಂತೆ ಪ್ರಸಕ್ತ ಸಾಲಿನಲ್ಲಿ ನೀಡಿರುವ ಗುರಿ ಹಾಗೂ ಸಾಧನೆಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಒಂದೊಮ್ಮೆ ಅನುಷ್ಠಾನಗೊಳಿಸಲು ಫಲಾನುಭವಿಗಳ ಕೊರತೆಯಿದ್ದಲ್ಲಿ, ಅದನ್ನು ಇತರೆ ಜಿಲ್ಲೆಗಳಿಗೆ ವರ್ಗಾಯಿಸಬೇಕು ಎಂದರು. ಗಂಗಾಕಲ್ಯಾಣ ಯೋಜನೆಯ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ವಿಳಂಬವಾಗುತ್ತಿರುವುದು ಕಂಡು ಬರುತ್ತಿದೆ. ಡಿ.ದೇವರಾಜ ಅರಸು, ಅಂಬೇಡ್ಕರ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಹಾಗೂ ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಿ, ಪ್ರತಿಶತ ನೂರರಷ್ಟು ಅನುಷ್ಠಾನಗೊಳಿಸಬೇಕು ಎಂದರು. ಸಸ್ಯ ಶ್ಯಾಮಲಾ ಯೋಜನೆಯಡಿ ಶಾಲಾ- ಕಾಲೇಜುಗಳಲ್ಲಿ ಮರ –ಗಿಡಗಳನ್ನು ನೆಡುವ ಕಾರ್ಯವನ್ನು ಸಾಮಾಜಿಕ ಅರಣ್ಯ ಇಲಾಖೆ ಯವರು ಅನುಷ್ಠಾನಗೊಳಿಸಬೇಕು. ಕಳೆದ 2019-20 ರಿಂದ ಈವರೆಗೆ ನೆಟ್ಟಿರುವ ಗಿಡ-ಮರಗಳ ದಾಖಲೆಗಳನ್ನು ಸಮರ್ಪಕವಾಗಿ ಇಟ್ಟುಕೊಳ್ಳಬೇಕು. ಶಾಲೆಗಳಿಗೆ ಭೇಟಿ ನೀಡಿದಾಗ 5 ವರ್ಷ, 3 ವರ್ಷ ಹಾಗೂ 2 ವರ್ಷಗಳ ಗಿಡ ಮರಗಳನ್ನು ಪರಿಶೀಲಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತಾಂತ್ರಿಕ ಸಹಾಯಕರ ಹುದ್ದೆ: ಅರ್ಜಿ ಅಹ್ವಾನ

ಉಡುಪಿ, ಜ.19: ಕೃಷಿ ಇಲಾಖೆಯ ವತಿಯಿಂದ ಅನುಷ್ಟಾನಗೊಳಿಸುತ್ತಿರುವ ಆಹಾರ ಮತ್ತು ಪೌಷ್ಟಿಕ...

ಜ. 19-21 ರವರೆಗೆ ನಾಟಕೋತ್ಸವ ಪ್ರದರ್ಶನ

ಉಡುಪಿ, ಜ.19: ಕಾರ್ಕಳ ಯಕ್ಷ ರಂಗಾಯಣ ಇವರ ವತಿಯಿಂದ ಜನವರಿ 19...

ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ

ಉಡುಪಿ, ಜ.19: ರಾಷ್ಟ್ರೀಯ ಹೆದ್ದಾರಿ 169 ಎ ರ ಉಡುಪಿ ನಗರ...

ಕರ್ನಾಟಕ ಕ್ರೀಡಾಕೂಟ ಸೈಕ್ಲಿಂಗ್ ಸ್ಪರ್ಧೆ: ಉಡುಪಿ ಜಿಲ್ಲೆಯಲ್ಲಿ ಸಂಚಾರ ಮಾರ್ಗ ಬದಲಾವಣೆ

ಉಡುಪಿ, ಜ.18: ಕರ್ನಾಟಕ ಕ್ರೀಡಾಕೂಟದ ಅಂಗವಾಗಿ ಜನವರಿ 19 ರಂದು ಸೈಕ್ಲಿಂಗ್...
error: Content is protected !!