ಕೋಟ: ಗಾಂಧಿಯ ವಿಚಾರಧಾರೆಗಳನ್ನು ಸರಿಯಾಗಿ ತಿಳಿದುಕೊಳ್ಳದೆ ಹಲವು ಬಗೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಎಳೆಯ ಮಕ್ಕಳು ಕೂಡ ತಪ್ಪು ತಪ್ಪಾಗಿ ಗಾಂಧಿಯನ್ನು ಅರ್ಥೈಸಿಕೊಳ್ಳುತ್ತಿದ್ದಾರೆ. ಇದು ಅಪಾಯಕಾರಿ. ಇದಕ್ಕೆ ಸಾಮಾಜಿಕ ಜಾಲತಾಣಗಳ ಪ್ರಭಾವ ಬಹಳಷ್ಟಿದೆ.
ಹಿರಿಯರು ಗಾಂಧಿಯ ವಿಚಾರಧಾರೆಗಳನ್ನು ಅರ್ಥಮಾಡಿಕೊಂಡವರಾಗಿದ್ದು ಗಾಂಧಿಯ ವಿಚಾರಧಾರೆಗಳನ್ನು ಎಳೆಯರಿಗೆ ತಲುಪಿಸಬೇಕಾಗಿದೆ ಎಂದು ಸಾಹಿತಿ ನರೇಂದ್ರ ಕುಮಾರ್ ಕೋಟ ಹೇಳಿದರು.
ಗಾಂಧಿ ವಿಚಾರ ವೇದಿಕೆ ಬ್ರಹ್ಮಾವರ ಘಟಕ ಕ.ಸಾ.ಪ ಕಚೇರಿ ಕೋಟದಲ್ಲಿ ಏರ್ಪಡಿಸಿದ ಗಾಂಧಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯ ಪೂರ್ವದ ಭಾರತದ ಸಾಮಾಜಿಕ ಸ್ತರವಿನ್ಯಾಸದ ಆಧಾರದ ಮೇಲೆ ಗಾಂಧಿಯನ್ನು ಯುವ ಜನತೆಗೆ ಮನಗಾಣಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗಾಂಧಿ ವಿಚಾರ ವೇದಿಕೆ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾದ ಪ್ರೊ. ಸಿ ಉಪೇಂದ್ರ ಸೋಮಯಾಜಿಯವರು, ಎಳೆಯರು ಗಾಂಧಿಯನ್ನು ಅವರ ಪರಿಸರದ ಪ್ರಭಾವ ಮತ್ತು ಸಮಕಾಲೀನ ತಿಳುವಳಿಕೆಯಿಂದ ಅರ್ಥೈಸಿಕೊಳ್ಳುತ್ತಾರೆ. ಇದು ಅಪಾಯಕಾರಿ ಕೂಡ. ಪರಿಪೂರ್ಣತೆಗೆ ಬಹಳಷ್ಟು ಹತ್ತಿರವಾಗಿದ್ದ ಗಾಂಧಿ ವಿಚಾರಧಾರೆಗಳು ಸರ್ವಕಾಲಕ್ಕೂ ಸಲ್ಲುವಂತದ್ದು.
ಐನ್ಸ್ಟೈನ್ ಹೇಳಿದಂತೆ ಇಂತಹ ಒಬ್ಬ ವ್ಯಕ್ತಿ ಭೂಮಿಯ ಮೇಲೆ ಜೀವಿಸಿದ್ದ ಅನ್ನೋದು ನಂಬುವುದು ಕಷ್ಟ. ಅಂತಹ ಗಾಂಧಿಯನ್ನು ಯುವ ಜನತೆ ಹಾಗೂ ಎಳೆಯ ಮಕ್ಕಳಿಗೆ ಹೆಚ್ಚು ಹೆಚ್ಚು ಪರಿಚಯಿಸುವ ಕೆಲಸವಾಗಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲೆಯ ಅಧ್ಯಕ್ಷ ಮತ್ತು ಗಾಂಧಿ ವಿಚಾರ ವೇದಿಕೆ ಮಾತೃ ಸಮಿತಿಯ ಉಪಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹಿಂದೆ ಆಕಾಶವಾಣಿಯಲ್ಲಿ ಪ್ರಸಾರವಾಗಿದ್ದ ತಮ್ಮ ಗಾಂಧಿ ಸ್ಮೃತಿಯನ್ನು ವಾಚಿಸಿದರು. ಉಪಾಧ್ಯಕ್ಷ ಎಚ್ ಸೋಮಶೇಖರ್ ಶೆಟ್ಟಿ, ಶ್ರೀಪತಿ ಹೇರ್ಳೆ, ನಾಗೇಶ ಮಯ್ಯ, ರಾಮಚಂದ್ರ ಐತಾಳ್ ಇವರು ಗಾಂಧಿ ಸಂಸ್ಮರಣೆಯನ್ನು ಮಾಡಿದರು.
ಪದಾಧಿಕಾರಿ ಮಹಾಲಕ್ಷ್ಮೀ ಸೋಮಯಾಜಿ ಗಾಂಧಿ ಪ್ರಾರ್ಥನೆಯನ್ನು ಹಾಡಿದರು. ಪದಾಧಿಕಾರಿಯಾದ ಸುಮನಾ ಹೇರ್ಳೆ ಸ್ವಾಗತಿಸಿ, ಭಾಸ್ಕರ ಪೂಜಾರಿ ವಂದಿಸಿದರು. ಗಾಂಧಿ ವಿಚಾರ ವೇದಿಕೆ ಬ್ರಹ್ಮಾವರ ಘಟಕದ ಕಾರ್ಯದರ್ಶಿ ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು.