ಉಡುಪಿ, ನ.1: ಸಾಹಿತಿ, ಚಿಂತಕ, ಸಂಶೋಧಕ ಹಾಗೂ ನಿವೃತ್ತ ಪ್ರಾಂಶುಪಾಲರಾದ ಡಾ. ಗಣನಾಥ ಶೆಟ್ಟಿ ಎಕ್ಕಾರು ಇವರಿಗೆ 2023 ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶಸ್ತಿ ಪ್ರದಾನ ಮಾಡಿದರು. 37 ವರ್ಷಗಳ ಕಾಲ ಬೋಧನೆ ನಡೆಸಿದ ಡಾ. ಗಣನಾಥ ಶೆಟ್ಟಿ ಎಕ್ಕಾರರು, ಮಂಗಳೂರು ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್. ಸಂಯೋಜನಾಧಿಕಾರಿಯಾಗಿ, ರಾಜ್ಯ ಎನ್.ಎಸ್.ಎಸ್ ಅಧಿಕಾರಿ ಮತ್ತು ಸರ್ಕಾರದ ಜಂಟಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಉಡುಪಿ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು, ರೆಡ್ ಕ್ರಾಸ್ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಮುಂಬಯಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಪದವಿ ಪಡೆದ ಇವರು ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕದ ಗೌರವಕ್ಕೆ ಪಾತ್ರರಾಗಿದ್ದಾರೆ.
ಸರಕಾರಿ ಕಾಲೇಜಿನಲ್ಲಿ ಮೊದಲಬಾರಿಗೆ ಕನ್ನಡ ಐಚ್ಛಿಕ ಮತ್ತು ಎಂ.ಎ. ಕನ್ನಡ ಪದವಿ ಆರಂಭಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಒಟ್ಟು 11 ಐ.ಎಸ್.ಬಿ.ಎನ್./ ಐ.ಎಸ್.ಎನ್. ಬರಹಗಳ ಪ್ರಕಟನೆ. ನಾರಾಯಣ ಗುರುಗಳು (2011), ತುಳುನಾಡಿನ ಜಾನಪದ ಸಂಶೋಧನೆ: ಒಂದು ಅವಲೋಕನ-2011, ಹೂವ ತರುವ ಮನೆಗೆ ಹುಲ್ಲ ತರುವೆ- 2014, ಸಹಕಾರಿ ಕ್ರಾಂತಿ ಮೂಲ ಪುರುಷ ಮೊಳಹಳ್ಳಿ ಶಿವರಾಯ (2014), ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ (2014) ಸೇರಿದಂತೆ ಹಲವಾರು ಕೃತಿಗಳಳು ಇವರ ಲೇಖನಿಯಿಂದ ಹೊರಹೊಮ್ಮಿದೆ.
2012-13 ನೇ ಸಾಲಿನ ಎನ್.ಎಸ್.ಎಸ್. ರಾಷ್ಟ್ರೀಯ ಪ್ರಶಸ್ತಿಯನ್ನು ಡಾ. ಎಕ್ಕಾರರು ರಾಷ್ಟ್ರಪತಿಗಳಿಂದ ಪಡೆದಿದ್ದರು. ಎನ್.ಎಸ್.ಎಸ್. ಅತ್ಯುತ್ತಮ ಯೋಜನಾಧಿಕಾರಿ ರಾಜ್ಯಪ್ರಶಸ್ತಿ, ಎನ್.ಎಸ್.ಎಸ್. ಅತ್ಯುತ್ತಮ ಸಂಯೋಜನಾಧಿಕಾರಿ ರಾಜ್ಯ ಪ್ರಶಸ್ತಿ ಮುಂಬೈ ವಿಶ್ವವಿದ್ಯಾನಿಲಯದಿಂದ ಡಾ. ವರದರಾಜ ಆದ್ಯ ಚಿನ್ನದ ಪದಕ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಗ್ರಂಥ ಪ್ರಶಸ್ತಿ. ಉಡುಪಿ ಗೋವಿಂದ ಪೈ ಸಂಶೋಧನಾ ಕೇಂದ್ರದಿಂದ ಫೆಲೋಶಿಪ್, ಮಂಗಳೂರು ವಿಶ್ವವಿದ್ಯಾನಿಲಯದಿಂದ ಬೆಳ್ಳಿ ಹಬ್ಬದ ಪುರಸ್ಕಾರ. ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಡಾ. ಗಣನಾಥ ಎಕ್ಕಾರು ವಹಿಸಿದ್ದಾರೆ.