ಉಡುಪಿ, ಅ.27: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಮಾಡುವ ಮಾಲೀಕರು, ಕಟ್ಟಡದ ನಕ್ಷೆಗೆ ಅನುಮೋದನೆ ಪಡೆದು ಕಟ್ಟಡದ ಮುಂದೆ ಅನುಮೋದಿತ ನಕ್ಷೆಯನ್ನು ಪ್ರದರ್ಶನ ಮಾಡಬೇಕು. ಇದರಿಂದ ಕಟ್ಟಡದ ಸ್ವರೂಪ, ವಿಸ್ತೀರ್ಣ, ಕಟ್ಟಡದ ಮಾದರಿ, ಇತರೆ ವಿಷಯಗಳು ಸಾರ್ವಜನಿಕರ ಗಮನಕ್ಕೆ ಬಂದು ಸಾರ್ವಜನಿಕರಲ್ಲಿ ಉಂಟಾಗುವ ಅನುಮಾನ ನಿವಾರಣೆಯಾಗಲಿದೆ. ಆದ್ದರಿಂದ ಪ್ರತಿ ಕಟ್ಟಡದ ಮಾಲೀಕರು ಕಟ್ಟಡ ಪ್ರಾರಂಭಿಸುವ ಮೊದಲು ಮಂಜೂರಾದ ನಕ್ಷೆಯನ್ನು ಕಟ್ಟಡದ ಎದುರು ಪ್ರದರ್ಶನ ಮಾಡಿ ಕಟ್ಟಡ ರಚನೆ ಮಾಡಬೇಕು. ಯಾವುದೇ ಬದಲಾವಣೆ ಅಥವಾ ಪರಿಷ್ಕೃತ ಮಾಡುವುದಿದ್ದಲ್ಲಿ ಸಂಬಂಧಿಸಿದ ಪ್ರಾಧಿಕಾರದಿಂದ ಅನುಮೋದನೆ ಪಡೆದುಕೊಳ್ಳಬೇಕು.
ಹೊಸ ಕಟ್ಟಡ ಪ್ರಾರಂಭಿಸುವ ಮೊದಲು ಅಂದರೆ ಮಾರ್ಕಿಂಗ್ ಮಾಡುವಾಗ ನಗರಸಭಾ ಅಭಿಯಂತರರ ಸಮಕ್ಷಮದಲ್ಲಿ ಮಾಡಿ, ನಂತರ ಅನುಮೋದಿತ ನಕ್ಷೆ ಪ್ರಕಾರ ಕಟ್ಟಡ ರಚನೆ ಮಾಡಬೇಕು. ಯಾವುದೇ ಕಾರಣಕ್ಕೂ ನಿಯಮ ಉಲ್ಲಂಘನೆ ಮಾಡದೇ ಕಟ್ಟಡವನ್ನು ನಿಯಮಾನುಸಾರ ರಚನೆ ಮಾಡಬೇಕು. ಅನುಮೋದಿತ ನಕ್ಷೆಯ ವಿರುದ್ಧವಾಗಿ ಕಟ್ಟಡ ರಚನೆ ಮಾಡಿದ್ದಲ್ಲಿ ನಿರಕ್ಷೇಪಣಾ ಪತ್ರ ನೀಡದೇ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.