ಉಡುಪಿ, ಅ.21: ಸರ್ಕಾರವು ರೈತರ ಅನುಕೂಲಕ್ಕಾಗಿ ಕೃಷಿ ಮತ್ತು ಕೃಷಿ ಸಂಬಂಧಿತ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ರೈತರು ಈ ಯೋಜನೆಗಳ ಸವಲತ್ತು ಪಡೆಯಲು ಪ್ರೂಟ್ಸ್ ತಂತ್ರಾಶದಲ್ಲಿ, ಆಧಾರ್ ಕಾರ್ಡ್, ಬ್ಯಾಂಕ್ ಪುಸ್ತಕ, ಜಾತಿ ದೃಢೀಕರಣ ಪತ್ರ, ರೇಷನ್ ಕಾರ್ಡ್, ಫೋಟೋ ಹಾಗೂ ಜಮೀನಿನ ಪಹಣಿ ಇತ್ಯಾದಿ ದಾಖಲಾತಿಗಳೊಂದಿಗೆ ನೊಂದಾಯಿಸಿಕೊಂಡು ಪೂಟ್ಸ್ ಐ.ಡಿ ಪಡೆಯಬಹುದಾಗಿದೆ. ನೊಂದಾವಣೆಯಾದ ವಿವರಗಳನ್ನು ಬೆಂಬಲ ಬೆಲ ಯೋಜನೆ, ಬೆಳೆ ವಿಮೆ ಯೋಜನೆ, ಬೆಳೆ ಸಾಲ, ಬೆಳೆ ನಷ್ಟ ಪರಿಹಾರ ಇತ್ಯಾದಿ ಸವಲತ್ತು ನೀಡಲು ಬಳಸಲಾಗುತ್ತದೆ. ಜಿಲ್ಲೆಯಲ್ಲಿ ಕೆಲವು ತಾಲೂಕುಗಳು ಬರ ಪೀಡಿತ ತಾಲೂಕುಗಳೆಂದು ಘೋಷಣೆಯಾಗಿರುವ ಹಿನ್ನಲೆ, ರೈತರಿಗೆ ಬೆಳೆ ನಷ್ಟ ಪರಿಹಾರ /ಇನ್‌ಪುಟ್ ಸಬ್ಸಿಡಿಯನ್ನು ಪ್ರೂಟ್ಸ್ ತಂತ್ರಾಂಶದಲ್ಲಿ ನೊಂದಾವಣೆಯಾಗಿರುವ ಜಮೀನಿನ ವಿಸ್ತೀರ್ಣದ ಆಧಾರದ ಮೇಲೆ ಮತ್ತು ಬೆಳೆ ಸಮೀಕ್ಷೆ ಆಧಾರದ ಮೇಲೆ ವಿತರಿಸಲಾಗುವುದರಿಂದ ರೈತರು ತಾವು ಹೊಂದಿರುವ ಎಲ್ಲಾ ಸರ್ವೆ ನಂಬರ್‌ಗಳನ್ನು ಪ್ರೂಟ್ಸ್ ತಂತ್ರಾಂಶದಲ್ಲಿ ನೊಂದಾಯಿಸುವುದು ಕಡ್ಡಾಯವಾಗಿರುತ್ತದೆ.
ಪ್ರೂಟ್ಸ್ ಐ.ಡಿ.ಯೊಂದಿಗೆ ಸೇರ್ಪಡೆಯಾಗದೆ ಇರುವ ಸರ್ವೆ ನಂಬರ್‌ಗಳನ್ನು ಸೇರ್ಪಡೆಗೊಳಿಸಲು ಆಧಾರ್, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಪಹಣಿ ಪ್ರತಿಯೊಂದಿಗೆ ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಿಗೆ ಸಂಪರ್ಕಿಸಬಹುದಾಗಿದೆ. ರೈತರು ತಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಬ್ಯಾಂಕ್‌ಗಳಿಗೆ ಭೇಟಿ ನೀಡಿ, ಆಧಾರ್ ಲಿಂಕ್ ಮತ್ತು ಎನ್.ಪಿ.ಸಿ.ಐ. ಮ್ಯಾಪಿಂಗ್ ಮಾಡಿಸಿಕೊಳ್ಳುವಂತೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.