ಕೋಟ, ಅ.21: ಮನುಷ್ಯ ಜನ್ಮದಲ್ಲಿ ಮನುಷತ್ವಕ್ಕೆ ವಿಶೇಷವಾಗಿ ಮನ ಮಿಡಿಯಬೇಕು. ತನ್ನಲ್ಲಿರುವ ನೋವಿನಿಂದ ಹತಾಶೆ ಪಡುವ ಬದಲು ಪರರ ನೋವಿಗೆ ಧ್ವನಿಯಾಗುವುದರ ಮೂಲಕ ಸಮಾಜಕ್ಕೆ ನಮ್ಮಿಂದ ಸಾಧ್ಯವಾದಷ್ಟು ನೆರವಾಗಬೇಕು. ಶ್ರೀ ವಿನಾಯಕ ಯುವಕ ಮಂಡಲದ ಇಂತಹ ಪುರಸ್ಕಾರಗಳಿಂದ ಸಮಾಜಕ್ಕೆ ಒಂದಿಷ್ಟು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಲಿದೆ. ಎಂತಹ ತುರ್ತು ಸಂದರ್ಭಗಳಲ್ಲಿ ನಿಮ್ಮ ಸೇವೆಗೆ ನಾನು ಸಿದ್ಧ ಎಂದು ಸಮಾಜ ಸೇವಕ ಮುಳುಗು ತಜ್ಞ ಈಶ್ವರ್ ಮಲ್ಪೆ ಹೇಳಿದರು. ಶ್ರೀ ವಿನಾಯಕ ಯುವಕ ಮಂಡಲ (ರಿ.) ಸಾಯ್ಬ್ರಕಟ್ಟೆ-ಯಡ್ತಾಡಿ ಇದರ ೧೨ ನೇ ವರ್ಷದ ಸಾರ್ವಜನಿಕ ಶ್ರೀ ಶಾರದ ಮಹೋತ್ಸವ ಕಾರ್ಯಕ್ರಮದಲ್ಲಿ ‘ಶ್ರೀ ವಿನಾಯಕ ಸಾಧನ ಶ್ರೀ ಪುರಸ್ಕಾರ’ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಈಶ್ವರ್ ಮಲ್ಪೆ ಅವರ ಸಾಧನೆಯ ಹೆಜ್ಜೆಗಳು ಯುವಜನಾಂಗಕ್ಕೆ ಪ್ರೇರಕವಾಗಿದ್ದು ಬೆಳೆಯುತ್ತಿರುವ ಸಮಾಜದಲ್ಲಿ ಕೆಟ್ಟ ಹವ್ಯಾಸಗಳಿಗೆ ಬಲಿಯಾಗದೆ ಇಂತಹ ಮಹನೀಯರಿಂದ ಪ್ರೇರಣೆ ಪಡೆದುಕೊಳ್ಳಬೇಕು, ಸಂಸ್ಕಾರಯುತ ಬದುಕು ಕಟ್ಟಿಕೊಳ್ಳುವುದು ನಾವು ಸಮಾಜಕ್ಕೆ ಕೊಡುವ ಕೊಡುಗೆ ಎಂದರು. ಯುವಕ ಮಂಡಲದ ಅಧ್ಯಕ್ಷರಾದ ನಂದೀಶ ನಾಯ್ಕ, ಜೈ ಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ (ರಿ.) ಸಾಯ್ಬ್ರಕಟ್ಟೆ ಶಿರಿಯಾರದ ಅಧ್ಯಕ್ಷರಾದ ಅಶೋಕ ಪ್ರಭು, ಯಡ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ಮಹಾತ್ಮ ಗಾಂಧಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸತೀಶ ನಾಯ್ಕ, ಉದ್ಯಮಿ ಅರುಣ್ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವಕ ಮಂಡಲದ ಸದಸ್ಯರಾದ ಅಜಿತ್ ಕುಮಾರ್ ಸ್ವಾಗತಿಸಿ, ರಾಘವೇಂದ್ರ ಶೆಟ್ಟಿ ಹೆಸ್ಕುತ್ತೂರು ಕಾರ್ಯಕ್ರಮ ನಿರೂಪಿಸಿದರು.