ಉಡುಪಿ, ಅ.19: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಜಾರಿಗೊಳಿಸಲಾದ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯ ಸೌಲಭ್ಯ ಪಡೆಯಲು ಅರ್ಹ ಗರ್ಭಿಣಿ ಹಾಗೂ ಬಾಣಂತಿ ಮಹಿಳೆಯರು ನೋಂದಾಯಿಸಿಕೊಳ್ಳಬಹುದಾಗಿದೆ. ಈ ಯೋಜನೆಯಡಿ ಮೊದಲ ಪ್ರಸವದ ಗರ್ಭಿಣಿ ಹಾಗೂ ಬಾಣಂತಿ ಮಹಿಳೆಯರಿಗೆ 5,000 ರೂ.ಗಳ ಪ್ರೋತ್ಸಾಹಧನ ನೀಡಲಾಗುವುದು. ಎರಡನೇ ಪ್ರಸವದಲ್ಲಿ ಜನಿಸುವ ಹೆಣ್ಣು ಮಗುವಿಗೆ 6,000 ರೂ. ಗಳ ಪ್ರೋತ್ಸಾಹಧನ ನೀಡಲಾಗುವುದು. ಈ ಪ್ರೋತ್ಸಾಹಧನವು ಗರ್ಭಿಣಿ / ಬಾಣಂತಿ ಮಹಿಳೆಯರು ಪೂರಕ ಆಹಾರ ಪಡೆಯಲು ಹಾಗೂ ಆರೋಗ್ಯವಂತ ಮಗುವಿನ ಜನನಕ್ಕೆ ಮತ್ತು ಪಾಲನೆಗೆ ಸಹಕಾರಿಯಾಗಲಿದೆ. ಮೊದಲನೇ ಪ್ರಸವದ ಗರ್ಭಿಣಿ/ ಬಾಣಂತಿಗೆ ಮೊದಲನೇ ಕಂತಿನಲ್ಲಿ 3,000 ರೂ. ಗಳನ್ನು ಗರ್ಭಧಾರಣೆ ಖಾತರಿ ನಂತರ, ಮೊದಲನೇ ಪ್ರಸವದ ಬಾಣಂತಿಗೆ ಎರಡನೇ ಕಂತಿನಲ್ಲಿ 2,000 ರೂ. ಗಳನ್ನು ಮಗು ಜನಿಸಿದ ನಂತರ ಹಾಗೂ ಎರಡನೇ ಪ್ರಸವದ ಹೆಣ್ಣು ಮಗು ಜನಿಸಿದ 3 ತಿಂಗಳ ನಂತರದಲ್ಲಿ 6,000 ರೂ. ಗಳನ್ನು ನೇರ ನಗದು ವರ್ಗಾವಣೆ (ಡಿ.ಬಿ.ಟಿ) ಮೂಲಕ ಫಲಾನುಭವಿಯ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುವುದು.
ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿ, ತಾಯಿ ಮತ್ತು ಶಿಶು ರಕ್ಷಣಾ ಕಾರ್ಡ್ ಪ್ರತಿ, ಫಲಾನುಭವಿಯ ಆಧಾರ್ ಕಾರ್ಡ್ ಪ್ರತಿ, ಪಡಿತರ ಚೀಟಿ / ಜಾತಿ ಮತ್ತು ಆದಾಯ ಪ್ರಮಾಣ ಪತ್ರ/ ನರೇಗಾ ಕಾರ್ಡ್/ ಇ-ಶ್ರಮ್ ಕಾರ್ಡ್/ ಆಯುಷ್ಮಾನ್ ಕಾರ್ಡ್ ಇವುಗಳಲ್ಲಿ ಯಾವುದಾದರೂ ಒಂದರ ಜೆರಾಕ್ಸ್ ಪ್ರತಿಯನ್ನು ಸಲ್ಲಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಗನವಾಡಿ ಕೇಂದ್ರದ ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಮೇಲ್ವಿಚಾರಕಿ ಅಥವಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.