ಉಡುಪಿ, ಅ.14: ಮಣಿಪಾಲ ತಾಂತ್ರಿಕ ವಿದ್ಯಾಲಯ ಸಿವಿಲ್ ಇಂಜಿನಿಯರಿಂಗ್ ವಿಭಾಗ ಹಾಗೂ ಹವಾಮಾನ ಬದಲಾವಣೆ ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ಡಾ. ಅನೀಶ್ ಕುಮಾರ್ ವಾರಿಯರ್ ಮುಂದಾಳುತ್ವದಲ್ಲಿ ಹಾಗೂ ಅದೇ ಸಂಸ್ಥೆಯ ಪ್ರಾಧ್ಯಾಪಕ ಡಾ. ಕೆ. ಬಾಲಕೃಷ್ಣರ ಸಹ ಮುಂದಾಳುತ್ವದಲ್ಲಿ ಉಡುಪಿ ಜಿಲ್ಲಾ ಕರಾವಳಿಯಾಧ್ಯಂತ ಮೀನುಗಳ ಸಿಗುವಿಕೆಯ ಪ್ರಮಾಣದ ಅಧ್ಯಯನ ನಡೆಸಲು ಕೇಂದ್ರ ಸರಕಾರದ ಭೂವಿಜ್ಞಾನ ಸಚಿವಾಲಯ ಹಾಗೂ ಹೈದರಾಬಾದಿನ ಭಾರತ ರಾಷ್ಟ್ರೀಯ ಸಾಗರ ಮಾಹಿತಿ ಸೇವಾ ಕೇಂದ್ರ (INCOIS) ₹93.15ಲಕ್ಷ ಅನುದಾನ ಕೊಡಮಾಡಿದೆ. ಈ ಸಂಶೋಧನೆಯನ್ನು ಮೂರು ವರ್ಷಗಳ ಕಾಲ ಕೈಗೊಳ್ಳಲಾಗುವುದು. ಈ ಸಂಶೋಧನೆಯು ಸಾಗರದಲ್ಲಿ ಆಗುತ್ತಿರುವ ಸೂಕ್ಷ್ಮ ಭೂ ಜೈವಿಕ ಬದಲಾವಣೆಗಳನ್ನು ಗಮನಿಸುವದು ಹಾಗೂ ಅದರಿಂದ ಮೀನಿನ ಇಳುವರಿಯಲ್ಲಾಗುವ ಪ್ರಮಾಣಗಳನ್ನು ಅಳೆಯುವದಾಗಿದೆ.
ಇತ್ತೀಚೆಗಿನ ಹವಾಮಾನ ಬದಲಾವಣೆಗಳು ಹಾಗೂ ಮೀನುಗಳ ಇಳುವರಿಯ ಮೇಲೆ ಆಗುವ ಅದರ ಪರಿಣಾಮ, ಸಾಗರ ಮಾಲಿನ್ಯ ಮತ್ತು ಅದರನ್ನು ತಡೆಗಟ್ಟುವಿಕೆಯ ಬಗ್ಗೆಯೂ ಅಧ್ಯಯನ ಮಾಡಲಾಗುವುದು. ಈ ಸಂಶೋಧನೆಯನ್ನು ಗೋವಾದಲ್ಲಿರುವ ರಾಷ್ಟ್ರೀಯ ಸಮುದ್ರ ವಿಜ್ಞಾನ ಸಂಸ್ಥೆ (NIO)ಯ ವಿಜ್ಞಾನಿಗಳಾದ ಡಾ. ದಾಮೋದರ ಶೆಣೈ, ಡಾ. ಸಿಬಿ ಕುರಿಯನ್ ಹಾಗೂ ಡಾ. ಮಂದಾರ್ ನಾನಜ್ಕರ್ ಸಹಯೋಗದಲ್ಲಿ ಮಾಡಲಾಗುವುದು.