ಉಡುಪಿ, ಅ.7: ಪೌರಕಾರ್ಮಿಕರ ರಕ್ಷಣೆಗೆ ಹಾಗೂ ಅವರ ಶ್ರೇಯೋಭಿವೃದ್ಧಿಗೆ ಸರಕಾರ ಅನೇಕ ಯೋಜನೆಗಳು ಹಾಗೂ ಕಾಯ್ದೆಗಳನ್ನು ಜಾರಿಗೆ ತಂದಿದೆ. ಇದರ ಪ್ರಯೋಜನವನ್ನು ಪ್ರತಿಯೊಬ್ಬ ಪೌರಕಾರ್ಮಿಕರು ಪಡೆಯಬೇಕೆಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಅವರು ಶನಿವಾರ ನಗರದ ಅಜ್ಜರಕಾಡು ಪುರಭವನದಲ್ಲಿ, ಉಡುಪಿ ನಗರಸಭೆ ವತಿಯಿಂದ ನಡೆದ ಪೌರಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಉಡುಪಿ ನಗರವು ಸ್ವಚ್ಛತೆಗ ಹೆಸರುವಾಸಿಯಾಗಿದೆ. ನಗರದ ಸ್ವಚ್ಛತೆಗೆ ಪೌರಕಾರ್ಮಿಕರ ಕೊಡುಗೆ ಅವಿರತವಾಗಿದ್ದು, ನಗರವನ್ನು ಸ್ವಚ್ಛವಾಗಿಡಲು ಪೌರಕಾರ್ಮಿಕರು ಶ್ರಮ ವಹಿಸುತ್ತಿದ್ದಾರೆ. ಕೊರೋನ ಸಂದರ್ಭದಲ್ಲಿ ಪೌರಕಾರ್ಮಿಕರು ಸಮಾಜದ ಉಳಿವಿಗಾಗಿ ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ ಎಂದರು. ಮಲ ಹೊರುವ ಪದ್ಧತಿ ನಿಷೇಧಕ್ಕೆ ಡಾ. ವಿ.ಎಸ್ ಆಚಾರ್ಯ ಅವರ ನೇತೃತ್ವದಲ್ಲಿ ದಿಟ್ಟ ನಿರ್ಧಾರ ಕೈಗೊಂಡು, ರಾಜ್ಯದಲ್ಲಿಯೇ ಮೊದಲ ಬಾರಿಗೆ ಮಲ ಹೊರುವ ಪದ್ಧತಿಯನ್ನು ನಿಷೇಧಿಸಿದ ಕೀರ್ತಿ ಉಡುಪಿ ನಗರ ಸಭೆಗೆ ಸಲ್ಲುತ್ತದೆ. ಯಂತ್ರೋಪಕರಣಗಳನ್ನು ಬಳಸಿ ಮ್ಯಾನ್‌ಹೋಲ್ ಗಳ ಸ್ವಚ್ಛತೆಗೆ ಮುಂದಾಗಬೇಕೆಂದು ಕಾನೂನು ಜಾರಿಗೊಳಿಸಿದ್ದು, ಇದರಿಂದ ಹಲವಾರು ಜೀವಗಳ ರಕ್ಷಣೆಯಾಗಿದೆ ಎಂದರು.
ಪೌರಕಾರ್ಮಿಕರ ಸುರಕ್ಷತೆಗೆ ಕೇಂದ್ರ ಸರ್ಕಾರವು ಸಫಾಯಿ ಮಿತ್ರ ಹಾಗೂ ನ್ಯಾಷನಲ್ ಸಫಾಯಿ ಕರ್ಮಚಾರಿ ಫೈನಾನ್ಸ್ ಎಂಡ್ ಡೆವಲಪ್‌ಮೆಂಟ್ ಕಾರ್ಪೋರೇಷನ್ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿ ಪೌರಕಾರ್ಮಿಕರಿಗೆ ಸಾಲಸೌಲಭ್ಯ, ಆರೋಗ್ಯ, ಮಕ್ಕಳ ಶಿಕ್ಷಣ, ವಸತಿ ವ್ಯವಸ್ಥೆ, ವಿಮೇ ಸೇರಿದಂತೆ ಹಲವು ಸೌಲಭ್ಯಗಳನ್ನು ಜಾರಿಗೊಳಿಸಿದ್ದು, ಇದರ ಪ್ರಯೋಜನವನ್ನು ಪ್ರತಿಯೊಬ್ಬ ಪೌರಕಾರ್ಮಿಕರು ಪಡೆದುಕೊಳ್ಳುವಂತೆ ತಿಳಿಸಿದರು. ಶಾಸಕ ಯಶ್‌ಪಾಲ್ ಎ ಸುವರ್ಣ ಮಾತನಾಡಿ, ಪೌರಕಾರ್ಮಿಕರು ಜೀವದ ಹಂಗನ್ನು ತೊರೆದು, ಕರ್ತವ್ಯಕ್ಕೆ ಚ್ಯುತಿಬಾರದಂತೆ ಪ್ರಮಾಣಿಕವಾಗಿ ಸ್ವಚ್ಛತಾ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರದ ಯೋಜನೆಗಳ ಕುರಿತು ಪೌರಕಾರ್ಮಿಕರಿಗೆ ಮಾಹಿತಿ ನೀಡಿ, ಅದರ ಪ್ರಯೋಜನವನ್ನು ಅವರ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಮಾತನಾಡಿ, ಪೌರಕಾರ್ಮಿಕರು ನಗರದ ಸ್ವಚ್ಛತೆಗೆ ಕಾಣಿಕೆ ನೀಡುತ್ತಿದ್ದು, ಅವರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರತಿಯೊಬ್ಬ ನಾಗರಿಕರು ತನ್ನ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಪೌರಕಾರ್ಮಿಕರೊಂದಿಗೆ ಕೈಜೋಡಿಸಬೇಕು ಎಂದರು. ಪೌರಕಾರ್ಮಿಕರು ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯ ಕಡೆಗೆ ಗಮನಹರಿಸಬೇಕು. ಪೌರಕಾರ್ಮಿಕರ ಆರೋಗ್ಯದ ಹಿತದೃಷ್ಠಿಯಿಂದ ಸರ್ಕಾರವು ವಿಮಾ ಸೌಲಭ್ಯವನ್ನು ಜಾರಿಗೊಳಿಸಿದ್ದು, ಪ್ರತೀ ಆರು ತಿಂಗಳಿಗೊಮ್ಮೆ ತಪಾಸಣೆ ನಡೆಸಲಿದ್ದು, ಇದರ ಪ್ರಯೋಜನವನ್ನು ಪೌರಕಾರ್ಮಿಕರು ಪಡೆದುಕೊಳ್ಳಬೇಕು ಎಂದರು. ಪೌರಕಾರ್ಮಿಕರು ಸ್ವಚ್ಛತಾ ಪರಿಕರಗಳನ್ನು ಬಳಸಿ, ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ತಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕೆ ಮಹತ್ವ ನೀಡುವುದರೊಂದಿಗೆ, ಅವರು ಉತ್ತಮ ರೀತಿಯಲ್ಲಿ ಬದುಕು ಕಟ್ಟಿಕೊಳ್ಳಲು ಪೋಷಕರು ಅವಕಾಶ ಕಲ್ಪಿಸಿಕೊಡಬೇಕು ಎಂದರು. ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರಿಗೆ ಏರ್ಪಡಿಸಲಾದ ಕ್ರೀಡಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು ಹಾಗೂ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸಿದ 10 ಮಂದಿಯನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶ ಭಟ್ ಕೊಡವೂರು, ನಗರಸಭೆಯ ಮಾಜಿ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ ಸಾಲ್ಯಾನ್, ನಗರಸಭಾ ಸದಸ್ಯೆ ರಶ್ಮಿ ಸಿ ಭಟ್, ಸ್ವಚ್ಛ ಭಾರತ್ ರಾಯಭಾರಿ ಜೋಸೆಫ್ ರೆಬೆಲ್ಲೋ, ನಗರಸಭಾ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಪೌರಾಯುಕ್ತ ರಾಯಪ್ಪ ಸ್ವಾಗತಿಸಿ, ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿದರು.