ಕೋಟ, ಅ.6: ಸಿನಿಮಾ ಕ್ಷೇತ್ರಕ್ಕೆ ಕರಾವಳಿ ಭಾಗದ ಜನರು ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿರುವುದು ಸಂತಸದ ವಿಷಯ, ಕುಂದಾಪ್ರ ಭಾಷೆಯ ಕಲಾತ್ಮಕ ಚಿತ್ರಗಳು ಇನ್ನಷ್ಟು ನಿರ್ಮಾಣವಾಗಿ, ಕುಂದಾಪ್ರ ಭಾಷೆಯ ಸೊಗಡು ವಿಶ್ವದಾದಂತ್ಯ ಪಸರಿಸಲಿ ಎಂದು ನಟ-ನಿರ್ದೇಶಕ ಅಭಿಲಾಷ್ ಶೆಟ್ಟಿ ಹೇಳಿದರು. ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ.)ಉಡುಪಿ, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರತಿಷ್ಠಾನ(ರಿ.)ಕೋಟ ಆಶ್ರಯದಲ್ಲಿ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಮತ್ತು ಹುಟ್ಟೂರ ಪ್ರಶಸ್ತಿಗೆ 19 ನೇ ವರುಷದ ಸಂಭ್ರಮ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇಂಪನ- 2023(ಸಂಗೀತ ಸಂಪುಟದ ಸಂಚಲನ) ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಚಲನಚಿತ್ರ ಉತ್ಸವ, ಸಂವಾದ ಮಾತುಕತೆ ಹಾಗೂ ಕಾರಂತ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಶೀಲಾ ಸೋಮಶೇಖರ್, ನಾವಾಡುವ ಭಾಷೆಯ ಬಗ್ಗೆ ಕೀಳರಿಮೆ ಮೂಡಿಸಿಕೊಳ್ಳದೆ ಅವಕಾಶವಿದ್ದಾಗ ಎಲ್ಲ ಕ್ಷೇತ್ರಗಳಲ್ಲಿ ಅದನು ಬಳಸಿಕೊಳ್ಳಬೇಕು ಎಂದರು. ಕೋಟತಟ್ಟು ಗ್ರಾಮ ಪಂಚಾಯತ್ ಸದಸ್ಯೆ ಅಶ್ವಿನಿ ದಿನೇಶ್, ಸದಸ್ಯರಾದ ಎಚ್. ಪ್ರಮೋದ ಹಂದೆ, ಸ.ಹಿ.ಪ್ರಾ.ಶಾಲೆ ಕೋಟತಟ್ಟು ಇಲ್ಲಿನ ಸಹಶಿಕ್ಷಕಿ ಸಂಗೀತಾ ಎಸ್ ಕೋಟ್ಯಾನ್ ಉಪಸ್ಥಿತರಿದ್ದರು. ರವೀಂದ್ರ ಶೆಟ್ಟಿ ತಂತ್ರಾಡಿ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭಾ ಕಾರ್ಯಕ್ರಮದ ನಂತರ ಸ.ಹಿ.ಪ್ರಾ.ಶಾಲೆ ಕೋಟತಟ್ಟು ವಿದ್ಯಾರ್ಥಿಗಳಿಂದ ಕಾರಂತ ದರ್ಶನ ಹಾಗೂ ಕೋಳಿತಾಳ್ ಸಿನಿಮಾ ಪ್ರದರ್ಶನ ನಡೆಯಿತು.