ಉಡುಪಿ, ಅ.5: ಕಾಲೇಜು ಯುವರೆಡ್‌ಕ್ರಾಸ್ ಘಟಕಗಳ ಕಾರ್ಯಕ್ರಮ ಅಧಿಕಾರಿಗಳು ತರಬೇತಿಯನ್ನು ಪಡೆದು ಅದನ್ನು ತಮ್ಮ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಹಾಗೂ ಸಂಘ-ಸಂಸ್ಥೆಗಳಿಗೆ ತಲುಪಿಸಿ, ಯುವರೆಡ್‌ಕ್ರಾಸ್‌ನ ಕಾರ್ಯಕ್ರಮವನ್ನು ಸಮರ್ಪಕ ರೀತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದು ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಪ್ರೊ.ಭಾಸ್ಕರ್ ಶೆಟ್ಟಿ ಹೇಳಿದರು. ಅವರು ಗುರುವಾರ ನಗರದ ಅಜ್ಜರಕಾಡು ರೆಡ್‌ಕ್ರಾಸ್ ಭವನದ ಹೆನ್ರಿ ಡ್ಯುನಂಟ್ ಹಾಲ್‌ನಲ್ಲಿ, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ರೆಡ್‌ಕ್ರಾಸ್ ಸೊಸೈಟಿ ಉಡುಪಿ ಜಿಲ್ಲಾ ಘಟಕ ಇವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲಾ ಕಾಲೇಜುಗಳ ವೈ.ಆರ್.ಸಿ ಘಟಕಗಳ ಕಾರ್ಯಕ್ರಮ ಅಧಿಕಾರಿಗಳಿಗೆ ನಡೆದ ಒಂದು ದಿನದ ಯುವ ರೆಡ್‌ಕ್ರಾಸ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆಯನ್ನು ಶಾಲಾ-ಕಾಲೇಜು ಹಂತದಲ್ಲಿಯೇ ಮೂಡಿಸಬೇಕು. ಯುವರೆಡ್‌ಕ್ರಾಸ್ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುವಂತೆ ತಿಳಿಸಿದ ಅವರು, ತರಬೇತಿ ಪಡೆದ ತರಬೇತುದಾರರು ಸಮಾಜಮುಖಿ ವಾತಾವರಣವನ್ನು ಸೃಷ್ಠಿಸುವುದರ ಮೂಲಕ ರೆಡ್‌ಕ್ರಾಸ್ ಸಂಸ್ಥೆಯನ್ನು ಜಿಲ್ಲೆಯಾದ್ಯಂತ ಅದ್ವಿತೀಯ ಸಂಸ್ಥೆಯನ್ನಾಗಿ ರೂಪಿಸಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸ್ರೂರು ರಾಜೀವ್ ಶೆಟ್ಟಿ ಮಾತನಾಡಿ, ರೆಡ್‌ಕ್ರಾಸ್ ಸಂಸ್ಥೆಯು ಯಾವುದೇ ಫಲಾಪೇಕ್ಷೆಯಿಲ್ಲದೇ ಮಾನವೀಯ ನೆಲೆಯಲ್ಲಿ ಹಲವಾರು ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳುತ್ತಾ ಬಂದಿದೆ. ಕಾಲೇಜುಗಳಲ್ಲಿ ಯೂತ್‌ರೆಡ್‌ಕ್ರಾಸ್ ಘಟಕವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರೊಂದಿಗೆ ಸಮಾಜಕ್ಕೆ ಸೇವೆ ನೀಡುವಂತಹ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಿ ಎಂದ ಅವರು, ರಕ್ತಕ್ಕೆ ಪರ್ಯಾಯ ಮಾರ್ಗವಿಲ್ಲ. ಇದನ್ನು ಉತ್ಪಾದನೆ ಮಾಡಲು ಸಾಧ್ಯವಿಲ್ಲ. ಬ್ಲಡ್‌ಬ್ಯಾಂಕ್‌ಗೆ ರಕ್ತವನ್ನು ಸಂಗ್ರಹಿಸಿ, ನೀಡುವುದರಿಂದ ಹಲವಾರು ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಸೇರಿದಂತೆ ಅಪಘಾತ ಹೊಂದಿದ ವ್ಯಕ್ತಿಗಳ ಜೀವ ಉಳಿಸಲು ಸಾಧ್ಯ. ಆದ್ದರಿಂದ ಹೆಚ್ಚು ರಕ್ತದಾನ ಶಿಬಿರಗಳನ್ನು ಏರ್ಪಡಿಸಲು ಆದ್ಯತೆ ನೀಡುವಂತೆ ತಿಳಿಸಿದರು. ರೆಡ್‌ಕ್ರಾಸ್ ಸಂಸ್ಥೆಯ ಕುಂದಾಪುರ ತಾಲೂಕು ಅಧ್ಯಕ್ಷ ಎಸ್. ಜಯಕರ ಶೆಟ್ಟಿ ಹಾಗೂ ರೆಡ್‌ಕ್ರಾಸ್ ಮ್ಯಾನೆಜಿಂಗ್ ಕಮಿಟಿ ಸದಸ್ಯ ವಿ.ಜಿ. ಶೆಟ್ಟಿ ಮಾತನಾಡಿದರು.
ರೆಡ್‌ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು, ರೆಡ್‌ಕ್ರಾಸ್‌ನ ಆಡಳಿತ ಮಂಡಳಿಯ ಸದಸ್ಯರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ವೈ.ಆರ್.ಸಿ ಟ್ರೈನರ್ ಸಚೇತ್ ಸುವರ್ಣ ಹಾಗೂ ಅನುರಾಧ ಅವರು ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವೈ.ಆರ್.ಸಿ ಘಟಕಗಳ ಕಾರ್ಯಕ್ರಮ ಅಧಿಕಾರಿಗಳಿಗೆ ತರಬೇತಿ ನೀಡಿದರು. ಮಂಗಳೂರು ವಿಶ್ವವಿದ್ಯಾನಿಲಯದ ಯೂತ್ ರೆಡ್‌ಕ್ರಾಸ್ ನೋಡೆಲ್ ಆಫೀಸರ್ ಡಾ. ಗಾಯತ್ರಿ ಎನ್ ಸ್ವಾಗತಿಸಿ, ಖಜಾಂಜಿ ರಮಾದೇವಿ ವಂದಿಸಿದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.