ಮಲ್ಪೆ, ಅ.4: ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ 30 ದಿನಗಳ ಔದ್ಯೋಗಿಕ, ಕೌಶಲಾಭಿವೃದ್ಧಿ ಮತ್ತು ವ್ಯಕ್ತಿತ್ವ ವಿಕಸನದ ತರಬೇತಿಗೆ ಚಾಲನೆ ನೀಡಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ ಕೆ. ಇವರು ಅಧ್ಯಕ್ಷತೆ ವಹಿಸಿ ತರಬೇತಿ ಉದ್ಘಾಟಿಸಿ ಮಾತನಾಡಿ, ಜೀವನ ಕೌಶಲ, ಔದ್ಯೋಗಿಕ ತರಬೇತಿಯು ಗ್ರಾಮೀಣ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಸಹಕಾರಿಯಾಗಿ ಕಾರ್ಪೋರೇಟ್ ವಲಯದಲ್ಲಿಯೂ ಉದ್ಯೋಗ ದೊರಕಿಸಿ ಕೊಡುವ ತರಬೇತಿ ಕಾರ್ಯಕ್ರಮವಾಗಿರುತ್ತದೆ ಎಂದರು. ಉದ್ಯೋಗ ಮಾಹಿತಿ ಘಟಕದ ಸಂಚಾಲಕರಾದ ದಿನೇಶ್ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ತರಬೇತಿಯು ಸ್ಪೋಕನ್ ಇಂಗ್ಲೀಷ್, ನಾಯಕತ್ವ ತರಬೇತಿ, ಸಂವಹನ ಕಲೆ, ಜೀವನ ಕೌಶಲ, ಸಂದರ್ಶನ ಎದುರಿಸುವ ಕಲೆ, ಸಮಯ ನಿರ್ವಹಣೆ, ಸಮೂಹ ಚರ್ಚೆ, ಭಾಷಣ ಕಲೆ, ವೃತ್ತಿ ಜೀವನಕ್ಕೆ ತಯಾರಿ ಮುಂತಾದ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ.
ಉನ್ನತಿ ಯುನೆಕ್ಸ್ಟ್ ತರಬೇತಿ ಸಂಸ್ಥೆಯ ತರಬೇತುದಾರರಾದ ಗುರುಪ್ರಸಾದ್ ಭಟ್, ಶೈಕ್ಷಣಿಕ ಸಂಚಾಲಕರಾದ ಡಾ. ಪ್ರಸಾದ್ ರಾವ್ ಎಂ. ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಉದ್ಯೋಗ ಮಾಹಿತಿ ಘಟಕದ ಸಂಚಾಲಕರಾದ ಉಮೇಶ್ ಪೈ ಸ್ವಾಗತಿಸಿ, ಐಕ್ಯೂಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ ವಂದಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.