ಕುಂದಾಪುರ: ನಮ್ಮ ಸಂವಿಧಾನದ ಉನ್ನತ ಆಶಯಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ಅದನ್ನು ಅಧ್ಯಯನ ಮಾಡುವಂತಹ ಕೌಶಲ್ಯವನ್ನು ನಾವು ಬೆಳೆಸಿಕೊಳ್ಳಬೇಕಿದೆ. ಪೂರ್ವಾಪರಗಳನ್ನು ಅರಿಯದೆ ಎಲ್ಲ ವಿಚಾರಗಳಿಗೂ ಅನಗತ್ಯವಾಗಿ ಸಂವಿಧಾನವನ್ನು ತಳುಕು ಹಾಕುವ ಕೆಟ್ಟ ಪ್ರವೃತ್ತಿ ನಮ್ಮಲ್ಲಿ ಕೊನೆಗಾಣಬೇಕಿದೆ ಎಂದು ಯುವ ಲೇಖಕ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಗುಜ್ಜಾಡಿ ಗೋಪಾಲನಾಯಕ ಇಂಡೋರ್ ಸ್ಟೇಡಿಯಂನಲ್ಲಿ ಗಂಗೊಳ್ಳಿ ರೋಟರಾಕ್ಟ್ ಕ್ಲಬ್ ಮತ್ತು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನದ ಮೂಲ ಆಶಯಗಳಿಗೆ ಬದ್ಧನಾಗಿರಬೇಕಾದ್ದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಅದಕ್ಕೆ ಚ್ಯುತಿ ಬರದಂತೆ ಎಲ್ಲರೂ ನಡೆದುಕೊಳ್ಳಬೇಕಿದೆ ಎಂದು ಹೇಳಿದರು. ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕ ವೆಂಕಟೇಶಮೂರ್ತಿ ಎನ್. ಸಿ ಅಧ್ಯಕ್ಷತೆ ವಹಿಸಿದ್ದರು.
ಗಂಗೊಳ್ಳಿ ರೋಟರಿ ಕ್ಲಬ್ ನ ಕಾರ್ಯದರ್ಶಿ ನಾರಾಯಣ ನಾಯ್ಕ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸುಗುಣ ಆರ್. ಕೆ, ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಘವೇಂದ್ರ ಶೇರುಗಾರ್, ಅಖಿಲ ಕರ್ನಾಟಕ ವೃತ್ತಿ ಶಿಕ್ಷಣ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಧರ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಶ್ರೇಯ ಮತ್ತು ರಮ್ಲ ಗಣರಾಜ್ಯೋತ್ಸವದ ಕುರಿತು ಮಾತನಾಡಿದರು. ರೋಟರಾಕ್ಟ್ ಕ್ಲಬ್ ಅಧ್ಯಕ್ಷೆ ಅಮೀಕ್ಷಾ ನಾಯ್ಕ್ ವಂದಿಸಿದರು. ವೈಷ್ಣವಿ ವಿ ಕಾರ್ಯಕ್ರಮ ನಿರೂಪಿಸಿದರು .