ಬ್ರಹ್ಮಾವರ, ಸೆ. 23: ದೇಶದ ಆರ್ಥಿಕ ಅಭಿವೃದ್ಧಿ ಯುವಜನರು ಸ್ವಂತ ಉದ್ಯೋಗ ಮಾಡಿದರೆ ಮಾತ್ರ ಸಾಧ್ಯ. ಪ್ರತಿಯೊಬ್ಬರೂ ತನ್ನದೇ ಆದ ಸ್ವಂತ ಉದ್ಯೋಗ ಮಾಡಿದರೆ ಆದಾಯ ಹೆಚ್ಚಾಗಲು ಸಾಧ್ಯ ಎಂದು ಬ್ರಹ್ಮಾವರ ಕ್ರಾಸ್ ಲ್ಯಾಂಡ್ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ನವೀನ್ ಕುಮಾರ್ ಶೆಟ್ಟಿ ಅಭಿಪ್ರಾಯಪಟ್ಟರು.
ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯಲ್ಲಿ 13 ದಿನಗಳ ಕಾಲ ನಡೆದ ಸಿಸಿ ಟಿ.ವಿ ಅಳವಡಿಕೆ ಮತ್ತು ದುರಸ್ತಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು. ಡಾ.ಡಿ. ವೀರೇಂದ್ರ ಹೆಗ್ಗಡೆಯವರು ನಡೆಸುವ ಕೆಲಸ ಕಾರ್ಯಗಳು ಸಮಾಜಕ್ಕೆ ಪ್ರಯೋಜನಕಾರಿಯಾಗಿದೆ ಎಂದು ಶುಭ ಹಾರೈಸಿದರು. ತರಬೇತಿಯ ಅತಿಥಿ ಉಪನ್ಯಾಸಕರಾದ ಗುರುರಾಜ್ ತಮ್ಮ ಅನುಭವ ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ನಿರ್ದೇಶಕರಾದ ಲಕ್ಷ್ಮೀಶ ಎ.ಜಿ ಮಾತನಾಡಿ, ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಹೆಚ್ವಿನ ಕಲಿಕೆ ಪಡೆದುಕೊಂಡಿದ್ದೀರಿ. ಇದರ ಸದುಪಯೋಗ ಪಡೆದು ಉದ್ಯಮಿಗಳಾಗಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿ ಎಂದರು. ಸಂಸ್ಥೆಯ ಹಿರಿಯ ಉಪನ್ಯಾಸಕ ಕೆ.ಕರುಣಾಕರ ಜೈನ್ ಸ್ವಾಗತಿಸಿ, ತರಬೇತಿಯ ಹಿನ್ನೋಟವನ್ನು ನೀಡಿ ನಿರೂಪಿಸಿದರು. ಉಪನ್ಯಾಸಕರಾದ ಸಂತೋಷ ಶೆಟ್ಟಿ ಉಪಸ್ಥಿತರಿದ್ದರು. ಹಿರಿಯ ಕಛೇರಿ ಸಹಾಯಕ ರವಿ ಸಾಲ್ಯಾನ್ ವಂದಿಸಿದರು. ಪ್ರಾರ್ಥನೆಯನ್ನು ರಾಘವೇಂದ್ರ ನೆರವೇರಿಸಿದರು. ದಕ್ಷ, ಜಯರಾಜ್, ಜಾನ್ಸನ್, ರಾಘವೇಂದ್ರ ತರಬೇತಿ ಅನುಭವ ಹಂಚಿಕೊಂಡರು.