ಕಾಪು, ಸೆ. 23: ಗ್ರಾಮೀಣ ಹೆರಿಗೆ ಮತ್ತು ಶಿಶು ಕಲ್ಯಾಣ ಕೇಂದ್ರ ಕಾಪು, ಸಮುದಾಯ ವೈದ್ಯಕೀಯ ವಿಭಾಗ, ಕೆ.ಎಂ.ಸಿ. ಮಣಿಪಾಲದ ವತಿಯಿಂದ ಕಾಪು ಆರೋಗ್ಯ ಕೇಂದ್ರದಲ್ಲಿ ಮಲೇರಿಯಾ ಮತ್ತು ಡೆಂಗ್ಯೂ ಜ್ವರದ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು. ಸಮುದಾಯ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಸ್ನೇಹ ಡಿ. ಮಲ್ಯ ಮಲೇರಿಯಾ ಮತ್ತು ಡೆಂಗ್ಯೂ ಜ್ವರವು ಯಾವ ರೀತಿ ಹರಡುತ್ತದೆ ಮತ್ತು ಅದರ ನಿಯಂತ್ರಣ ಮಾಡುವ ಕುರಿತು ಮಾಹಿತಿ ನೀಡಿ, ನೀರು ನಿಲ್ಲುವುದನ್ನು ತಡೆಯುವ ಮೂಲಕ ಮತ್ತು ಪೂರ್ಣ ತೋಳಿನ ಬಟ್ಟೆ, ಸೊಳ್ಳೆ ಪರದೆ, ಸೊಳ್ಳೆ ಬತ್ತಿಯಂತಹ ವೈಯಕ್ತಿಕ ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಹಾಗೂ ಮನೆ ಮತ್ತು ಸುತ್ತಮುತ್ತ ಸೊಳ್ಳೆಗಳ ಉತ್ಪತ್ತಿಯನ್ನು ತಡೆಗಟ್ಟುವ ಮೂಲಕ ಡೆಂಗ್ಯೂವನ್ನು ನಿಯಂತ್ರಿಸಬಹುದೆಂದು ತಿಳಿಸಿದರು.
ಸಮುದಾಯ ವೈದ್ಯಕೀಯ ವಿಭಾಗದ ಸಾಮಾಜಿಕ ಕಾರ್ಯಕರ್ತ ಮಹೇಶ್, ಲ್ಯಾಬ್ ಟೆಕ್ನಿಶಿಯನ್ ಸುಕೇತ್, ಸಿಬ್ಬಂದಿ ನಾಗೇಶ್ ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಲಕ್ಷ್ಮೀ, ಸುಶೀಲಾ, ವಿನೋದಾ ಮತ್ತು ಆಶಾ ಉಪಸ್ಥಿತರಿದ್ದರು. ಸಾಮಾಜಿಕ ಕಾರ್ಯಕರ್ತ ಮಹೇಶ್ ಕಾರ್ಯಕ್ರಮ ನಿರೂಪಿಸಿದರು.