ಉಡುಪಿ, ಸೆ. 16: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ.) ಕಲ್ಯಾಣಪುರ ಸಂತೆಕಟ್ಟೆ ಇದರ 37ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಲ್ಯಾಣಪುರ ಸಂತೆಕಟ್ಟೆಯ ಬೃಂದಾವನ ಹೋಟೆಲ್ ನ ಹಾಗೂ ಗೋಪಾಲಕೃಷ್ಣ ಮಠದ ವಠಾರದಲ್ಲಿ ಸೆ. 19 ರಿಂದ ಸೆ. 22 ರವರೆಗೆ ನಡೆಯಲಿದೆ. ಸೆ. 19 ರಂದು ವಿಗ್ರಹ ಪ್ರತಿಷ್ಠಾಪನೆ ಮತ್ತು ಪೂಜಾ ಕಾರ್ಯಕ್ರಮಗಳು ಮುಖ್ಯ ಅರ್ಚಕರಾದ ಶ್ರೀವತ್ಸ ಪರಾಡ್ಕರ್ ಮೂಡುಬಿದಿರೆ ಮತ್ತು ಅರ್ಚಕರಾದ ಶಶಿಧರ ಗುರ್ಜಾರ್ ಹರಿಬೆಟ್ಟು ಇವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ.
ಪ್ರತಿದಿನ ಮಧ್ಯಾಹ್ನ 12.30ಕ್ಕೆ ಮತ್ತು ರಾತ್ರಿ 8.30ಕ್ಕೆ ಮಹಾಪೂಜೆ, ಸಹಸ್ರ ದೀಪಾರಾಧನೆ ರಂಗಪೂಜೆ ನಡೆಯಲಿದೆ. ಶ್ರೀ ಮೋಹನ್ ತೋನ್ಸೆ ವೇದಿಕೆಯಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಮತ್ತು ಸತ್ಯನಾರಾಯಣ ಪುಣಿಚಿತ್ತಾಯ ಭಾಗವತಿಕೆಯಲ್ಲಿ ಯಕ್ಷಗಾನ ನಾಟ್ಯ ಹಾಸ್ಯ ವೈಭವ ಸೆಪ್ಟೆಂಬರ್ 19 ರಂದು ರಾತ್ರಿ 9ಕ್ಕೆ ನಡೆಯಲಿದೆ. ಸೆ. 20 ರಂದು ಸಂಜೆ ಶಾಲಾ ಮಕ್ಕಳ ನೃತ್ಯ ಸ್ಪರ್ಧೆ ಮತ್ತು ನೃತ್ಯ ನಿಕೇತನ ಕೊಡವೂರು ಕಲಾವಿದರಿಂದ ವಿದ್ವಾನ್ ಸುಧೀರ್ ರಾವ್ ಕೊಡವೂರು ಮತ್ತು ಕಾಂತಾರ ಸಿನೆಮಾ ಖ್ಯಾತಿಯ ವಿದುಷಿ ಮಾನಸಿ ಸುಧೀರ್ ನಿರ್ದೇಶನದ ‘ನೃತ್ಯ ಸಿಂಚನ’ ನಡೆಯಲಿದೆ. ಸೆ. 21 ರಂದು ರಾತ್ರಿ 9ಕ್ಕೆ ಅಭಿನಯ ಕಲಾವಿದರು ಉಡುಪಿ ಇವರಿಂದ ‘ಶಾಂಭವಿ’ ನಾಟಕ ನಡೆಯಲಿದೆ.
ಸೆ. 22 ರಂದು ಮಧ್ಯಾಹ್ನ ಮಹಾಪೂಜೆಯ ನಂತರ ವಿವಿಧ ವೇಷಗಳ ಪ್ರದರ್ಶನ ನಡೆಯಲಿದೆ. ಸಂಜೆ 4 ಗಂಟೆಗೆ ವಿಸರ್ಜನಾ ಪೂಜೆಯ ನಂತರ ವಿಸರ್ಜನಾ ಮೆರವಣಿಗೆ ನಡೆಯಲಿದೆ. ವಿವಿಧ ಟ್ಯಾಬ್ಲೋಗಳ ಮೆರವಣಿಗೆ ಸಂತೆಕಟ್ಟೆಯಿಂದ ಕಲ್ಯಾಣಪುರ ಸುವರ್ಣ ನದಿಯವರೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.