ಕಾಪು, ಸೆ. 15: ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು ಇಲ್ಲಿ ಜಿಲ್ಲಾ ಮಟ್ಟದ ರೋವರ್ ರೇ೦ಜರ್ ಮೇಟ್(ನಾಯಕತ್ವ ಶಿಬಿರ) ಹಾಗೂ ವಿಪತ್ತು ನಿರ್ವಹಣಾ ತರಬೇತಿ ಶಿಬಿರ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗೋಪಾಲಕೃಷ್ಣಎಂ. ಗಾಂವ್ಕರ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಶಿಸ್ತು, ಸಹಬಾಳ್ವೆ, ಹಾಗೂ ನಾಯಕತ್ವ ಗುಣಗಳನ್ನು ತಮ್ಮ ಜೀವನದಲ್ಲಿ ಆಳವಡಿಸಲು ಇಂತಹ ಶಿಬಿರಗಳು ಅತ್ಯಗತ್ಯ ಎಂದರು.
ಉಡುಪಿ ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯದರ್ಶಿ ಬಿ. ಆನಂದ ಅಡಿಗ, ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಸುಮನಾಶೇಖರ್, ರೇಂಜರ್ ಲೀಡರ್ ಸವಿತಾ, ರೋವರ್ ಸ್ಕೌಟ್ಸ್ ಲೀಡರ್ ವಿತೇಶ್ ಕಾಂಚನ್ ಉಪಸ್ಥಿತರಿದ್ದರು. ಶಿಬಿರದಲ್ಲಿ ಉಡುಪಿ ಜಿಲ್ಲೆಯ ವಿವಿಧ ಕಾಲೇಜಿನ 70 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ, ಮ್ಯಾಪಿಂಗ್, ಧ್ವಜಗಳ ಮಾಹಿತಿ, ಗಂಟುಗಳು ಮತ್ತು ಲಾಸಿಂಗ್ ಬಗ್ಗೆ ಮಾಹಿತಿ ನೀಡಲಾಯಿತು.