ಉಡುಪಿ: ರಾಜ್ಯ ಚುನಾವಣಾ ಆಯೋಗಗಳ ನಿರ್ದೇಶನದಂತೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇಲ್ಲಿ ಮತದಾರರ ದಿನಾಚರಣೆಯನ್ನು ಆಚರಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಗಣನಾಥ ಎಕ್ಕಾರು, ಒಂದೇ ಮತ ಒಂದೇ ಮೌಲ್ಯ ಪ್ರಜಾಪ್ರಭುತ್ವದ ಜೀವಾಳ. ಮತದಾರರು ತಮ್ಮ ಹಕ್ಕಿನ ಬಗ್ಗೆ ಅರಿವು ಮೂಡಿಸಿಕೊಂಡು ನಿಷ್ಪಕ್ಷಪಾತವಾಗಿ ತಮ್ಮ ಹಕ್ಕನ್ನು ಚಲಾಯಿಸಬೇಕು. ಮತದಾರರ ದಿನಾಚರಣೆ ಪಾರದರ್ಶಕ ಮತದಾನದ ಬಗ್ಗೆ ಅರಿವು ಮೂಡಿಸುವ ದಿನ ಎಂದರು.
ಐ.ಕ್ಯೂ.ಎ.ಸಿ. ಸಂಚಾಲಕ ಡಾ. ಸುರೇಶ್ ರೈ ಪ್ರಜಾಪ್ರಭುತ್ವದಲ್ಲಿ ಮತದಾರ ಹಕ್ಕಿನ ಮಹತ್ವವನ್ನು ವಿವರಿಸಿದರು. ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಮಂಜುನಾಥ ಪ್ರಸ್ತಾವಿಕವಾಗಿ ಸ್ವಾಗತಿಸಿ, ಸಂಖ್ಯಾಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಉಮೇಶ್ ಪೈ ವಂದಿಸಿದರು. ಇತಿಹಾಸ ಎಂ.ಎ. ವಿದ್ಯಾರ್ಥಿನಿ ಅಶ್ವಿಜ ನಿರೂಪಿಸಿದರು. ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ತಿಮ್ಮಣ್ಣ ಜಿ. ಭಟ್, ಡಾ. ಉದಯ ಶೆಟ್ಟಿ ಕೆ. ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮುಕ್ತ ಮತ್ತು ಪಾರದರ್ಶಕ ಮತದಾನದ ಬಗ್ಗೆ ಪ್ರತಿಜ್ಞೆಯನ್ನು ಇತಿಹಾಸ ವಿಭಾಗ ರಿಯಾಜ್ ಅಹ್ಮದ್ ಬೋಧಿಸಿದರು.