ಉಡುಪಿ, ಸೆ.5: ಮನಸ್ಸುಗಳೊಂದಿಗೆ ಕೆಲಸ ಮಾಡುವ ಶಿಕ್ಷಕರು ಸಮಾಜ ಕಟ್ಟುವ ಮತ್ತು ಬೆಳೆಸುವ ಮಹತ್ತರ ಜವಾಬ್ದಾರಿ ಹೊಂದಿದ್ದಾರೆ. ಆದುದರಿಂದ ಮಕ್ಕಳಿಗೆ ಜ್ಞಾನದ ಜೊತೆ ಕೌಶಲ್ಯ ಮತ್ತು ವೌಲ್ಯವನ್ನು ಕಲಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕಾಗಿದೆ. ಅಲ್ಲದೆ ಶಿಕ್ಷಕರಲ್ಲಿ ಅಧ್ಯಯನಶೀಲತೆ ಎಂಬುದು ಅತೀ ಮುಖ್ಯವಾಗಿರಬೇಕು ಎಂದು ಹಿರಿಯ ಚಿಂತಕ, ನಿಕಟಪೂರ್ವ ರಾಜ್ಯ ಎನ್‌ಎಸ್‌ಎಸ್ ಅಧಿಕಾರಿ ಡಾ. ಗಣನಾಥ ಎಕ್ಕಾರು ಹೇಳಿದರು.
ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಮಲಬಾರ್ ಗೋಲ್ಡ್‌ನಲ್ಲಿ ಮಂಗಳವಾರ ಆಯೋಜಿಸಲಾದ ಶಿಕ್ಷಕರಿಗೆ ಸನ್ಮಾನ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು. ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ. ಕಾಲ ಬದಲಾದಂತೆ ಶಿಕ್ಷಣ ಮತ್ತು ಶಿಕ್ಷಕರ ಸ್ವರೂಪ ಕೂಡ ಬದಲಾಗುತ್ತಿದೆ. ವಿದ್ಯಾರ್ಥಿಗಳನ್ನು ಸಶಕ್ತವಾಗಿ ಮುಂದಿನ ಬದುಕಿಗೆ ಸಿದ್ಧಗೊಳಿಸುವುದೇ ಶಿಕ್ಷಣದ ಕೆಲಸ. ಅದು ಸರಿಯಾದ ಜ್ಞಾನದಿಂದ ಮಾತ್ರ ಸಾಧ್ಯವಾಗುತ್ತದೆ. ಕೇವಲ ಪುಸ್ತಕ ಜ್ಞಾನ ಮಾತ್ರವಲ್ಲದೆ ಜಗತ್ತಿನ ವಿದ್ಯಾಮಾನ, ಸಾಮಾಜಿಕ, ರಾಜಕೀಯ, ಆರ್ಥಿಕ ಜ್ಞಾನ ಕೂಡ ಮುಖ್ಯ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಪಠ್ಯಪುಸ್ತಕದ ಬೋಧನೆ ಜೊತೆಗೆ ಮಕ್ಕಳಿಗೆ ವೌಲ್ಯಯುತ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ. ಮಕ್ಕಳಲ್ಲಿ ಕಲೆ, ಸಂಸ್ಕೃತಿ, ಭಾಷೆಯ ಬಗ್ಗೆ ಅರಿವು ಮೂಡಿಸಬೇಕು. ಸಮಾಜದಲ್ಲಿನ ಮನಸ್ಸುಗಳನ್ನು ಒಡೆಯುವ ಬದಲು ಒಗ್ಗೂಡಿಸುವ ಕಾರ್ಯ ಮಾಡಬೇಕು. ಈ ಮೂಲಕ ಸೌಹಾರ್ದತಯುತ ಸಮಾಜ ನಿರ್ಮಿಸಬೇಕು ಎಂದರು.
ಶಿಕ್ಷಕರುಗಳಾದ ಕರುಣಾಕರ ಬಂಗೇರ, ಅಸ್ಲಾಂ ಹೈಕಾಡಿ, ಕಿರಣ್ ಕುಮಾರ್ ಶೆಟ್ಟಿ, ಶಶಿಕಲಾ, ಎಚ್.ಸಖಾರಾಮ್, ವಸಂತಿ ಅಂಬಲ ಪಾಡಿ ಅವರನ್ನು ಸನ್ಮಾನಿಸಲಾಯಿತು. ಉಡುಪಿ ನಗರಸಭೆ ಸದಸ್ಯ ಡಿ.ಬಾಲಕೃಷ್ಣ ಶೆಟ್ಟಿ ಶುಭ ಹಾರೈಸಿದರು. ಮಲಬಾರ್ ಗೋಲ್ಡ್‌ನ ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್, ಸ್ಟೋರ್ ಮೆನೇಜರ್ ಪುರಂದರ ತಿಂಗಳಾಯ, ಜಿಆರ್‌ಎಂ ರಾಘವೇಂದ್ರ ನಾಯಕ್, ಎಎಂಎಂ ತಂಝೀಮ್ ಶಿರ್ವ ಉಪಸ್ಥಿತರಿದ್ದರು. ವಿಘ್ನೇಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.