ಉಡುಪಿ, ಆ.30: ವೈದ್ಯರು ಹಾಗೂ ರೋಗಿಯ ನಡುವೆ ಮಾನವೀಯ ಅನುಬಂಧ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸರಿಯಾದ ಮಾರ್ಗದರ್ಶನ ನೀಡಿ, ಅರಿವು ಮೂಡಿಸಿದಲ್ಲಿ ತಾಯಿ ಮರಣ ಪ್ರಮಾಣವನ್ನು ಕಡಿಮೆಗೊಳಿಸಬಹುದು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು. ಅವರು ಬುಧವಾರ ನಗರದ ಕೆ.ಎಂ.ಸಿ. ಮಣಿಪಾಲದ ಟಿ.ಎಂ.ಎ. ಪೈ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಉಡುಪಿ ಜಿಲ್ಲೆ ಹಾಗೂ ಪ್ರಸೂತಿ ಹಾಗೂ ಸ್ತ್ರೀರೋಗ ವಿಭಾಗ ಮತ್ತು ಸಮುದಾಯ ವೈದ್ಯಕೀಯ ವಿಭಾಗ, ಕೆ.ಎಂ.ಸಿ. ಮಣಿಪಾಲ ಇವರ ಸಹಯೋಗದೊಂದಿಗೆ ಪ್ರಧಾನ್ ಮಂತ್ರಿ ಸುರಕ್ಷತಾ ಮಾತೃತ್ವ ಅಭಿಯಾನದಡಿಯಲ್ಲಿ ಜಿಲ್ಲೆಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು ಹಾಗೂ ವೈದ್ಯಾಧಿಕಾರಿಗಳಿಗೆ ಹೆಚ್ಚಿನ ಅಪಾಯದ ಗರ್ಭಧಾರಣೆಯ ನಿರ್ವಹಣೆಯ ಕುರಿತು ನಡೆದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಹೆ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಮಾತನಾಡಿ, ಉಡುಪಿ ಹಾಗೂ ದ.ಕ. ಜಿಲ್ಲೆಯಲ್ಲಿ ತಾಯಿ ಮರಣವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕೆ.ಎಂ.ಸಿ. ಮಣಿಪಾಲ ಆಸ್ಪತ್ರೆಯ ಮುಖಾಂತರ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ಮಾತನಾಡಿ, ಖಾಸಗಿ ಫಿಸಿಶಿಯನ್‌ಗಳು, ಸ್ತ್ರೀ ರೋಗ ತಜ್ಞರು, ರೇಡಿಯಾಲಾಜಿಸ್ಟಗಳು ಸ್ವಯಂ ಪ್ರೇರಿತವಾಗಿ ಅಭಿಯಾನದಲ್ಲಿ ವೆಬ್‌ಸೈಟ್ https://pmsma.nhp.gov.in/pmsma-app/ನಲ್ಲಿ ನೋಂದಾವಣೆ ಮಾಡಿಕೊಳ್ಳುವ ಮೂಲಕ ಭಾಗವಹಿಸಬಹುದಾಗಿದ್ದು, ಪ್ರತೀ ತಿಂಗಳು 9 ಮತ್ತು 24 ನೇ ದಿನಾಂಕಗಳಂದು ಖಾಸಗಿ ವೈದ್ಯರು ಸಮೀಪದಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಸವ ಪೂರ್ವ ಆರೈಕೆ ಸೇವೆ ನೀಡಬಹುದಾಗಿದೆ ಎಂದರು.
ಕೆ.ಎಂ.ಸಿ ಮಣಿಪಾಲದ ಡೀನ್ ಡಾ. ಪದ್ಮರಾಜ್ ಹೆಗ್ಡೆ, ಕೆ.ಎಂ.ಸಿ. ಮಣಿಪಾಲ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಆರ್.ಸಿ.ಹೆಚ್. ಅಧಿಕಾರಿ ಡಾ. ಎಂ.ಜಿ. ರಾಮ, ಕೆ.ಎಂ.ಸಿ. ವೀಕ್ಷಕ ಡಾ. ಶರತ್ಚಂದ್ರ, ಪ್ರಸೂತಿ ಹಾಗೂ ಸ್ತ್ರೀ ರೋಗ ವಿಭಾಗದ ಮುಖ್ಯಸ್ಥ ಡಾ. ಶ್ರೀಪಾದ್ ಹೆಬ್ಬಾರ್, ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಅಶ್ವಿನಿ ಕುಮಾರ್ ಹಾಗೂ ಆರೋಗ್ಯ ಇಲಾಖೆಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳೂ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಡೀನ್ ಡಾ. ಪದ್ಮರಾಜ್ ಹೆಗ್ಡೆ ಸ್ವಾಗತಿಸಿ, ಡಾ. ಸ್ನೇಹಾ ಡಿ. ಮಲ್ಯ ನಿರೂಪಿಸಿ, ಡಾ. ಶ್ರೀಪಾದ್ ಹೆಬ್ಬಾರ್ ವಂದಿಸಿದರು. ಹೆಚ್ಚಿನ ಅಪಾಯದ ಗರ್ಭಧಾರಣೆಯ ನಿರ್ವಹಣೆಯ ವಿವಿಧ ವಿಷಯದ ಕುರಿತು ಮಾಹಿತಿ ಕಾರ್ಯಗಾರ ನಡೆಯಿತು.