ಮಲ್ಪೆ, ಆ. 29: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಜಿಲ್ಲಾಡಳಿತ ಉಡುಪಿ, ಯುವ ಸಬಲೀಕರಣ ಇಲಾಖೆ, ಜಿಲ್ಲಾಸ್ಪತ್ರೆ ಉಡುಪಿ ಹಾಗೂ ಲಯನ್ಸ್ ಕ್ಲಬ್ ಅಮೃತ್ ಉಡುಪಿ ಇದರ ಸಹಯೋಗದಲ್ಲಿ ರಾಷ್ಟ್ರೀಯ ರೆಡ್‌ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ದೈಹಿಕ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ಮಂಗಳವಾರ ನಡೆಯಿತು. ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಉದ್ಘಾಟನೆ ನೆರವೇರಿಸಿದರು. ವಿದ್ಯಾರ್ಥಿ ದಿಸೆಯಲ್ಲಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ಶ್ರದ್ಧೆ ಮತ್ತು ಕರ್ತವ್ಯನಿಷ್ಠೆಯನ್ನು ಪಾಲಿಸಿಕೊಂಡು ತಮ್ಮ ಪ್ರತಿಭೆಯನ್ನು ಬೆಳೆಸಿಕೊಂಡಲ್ಲಿ ಬದುಕಿನಲ್ಲಿ ಯಶಸ್ಸು ಮತ್ತು ಸ್ವಾವಲಂಬನೆ ಸಾಧ್ಯ. ಕಾಲೇಜು ಹಂತದಲ್ಲಿ ಯಾವುದೇ ಆಮಿಷಗಳಿಗೆ ಬಲಿ ಬೀಳದೇ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವಲ್ಲಿ ಉತ್ತಮ ಪ್ರಜೆಯಾಗಿ ದೇಶಕ್ಕೆ ಕೊಡುಗೆ ನೀಡಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ. ಸುರೇಶ್ ರೈ ಕೆ ವಹಿಸಿದ್ದರು. ಜಿಲ್ಲಾ ಸರ್ಜನ್ ಡಾ. ವೀಣಾ ಇವರು ರಕ್ತದಾನದ ಮಹತ್ವವನ್ನು ಮತ್ತು ಅಗತ್ಯತೆಯನ್ನು ವಿವರಿಸಿದರು. ಲಯನ್ಸ್ ಕ್ಲಬ್ ಅಮೃತ್ ಅಧ್ಯಕ್ಷರಾದ ಭಾರತಿ ಎಚ್.ಎನ್., ರೆಡ್‌ಕ್ರಾಸ್ ಉಡುಪಿ ಜಿಲ್ಲಾಧ್ಯಕ್ಷ ಬಸ್ರೂರು ರಾಜೀವ ಶೆಟ್ಟಿ ಉಪಸ್ಥಿತರಿದ್ದರು. ಡಾ. ರೋಶನ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ. ಪ್ರಸಾದ್ ರಾವ್ ಎಂ. ವಂದಿಸಿದರು. ಪ್ರಶಾಂತ್ ನೀಲಾವರ ಕಾರ್ಯಕ್ರಮ ನಿರೂಪಿಸಿದರು. ಹಾಕಿ ದಂತಕಥೆ ಮೇಜರ್ ಧ್ಯಾನ್‌ಚಂದ್ ಭಾವಚಿತ್ರಕ್ಕೆ ಪುಷ್ಪಾಂಜಲಿಗೈದು ಸ್ಮರಿಸಲಾಯಿತು.