ಮಣಿಪಾಲ, ಆ.17: ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ದತ್ತಿ ನಿಧಿಯನ್ನು ರಚಿಸಲು ಮಾಹೆ ಮಣಿಪಾಲ ಮತ್ತು ಶಾಂತನು ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ನಾಲ್ಕು ವರ್ಷಗಳ ಕಾಲ ಟ್ರಸ್ಟ್ ಪ್ರತಿ ವರ್ಷ 25 ಲಕ್ಷ ರೂಪಾಯಿ ಠೇವಣಿ ಇಡಲಿದೆ ಮತ್ತು ಮಾಹೆ ಮಣಿಪಾಲವು ಅಷ್ಟೇ ಮೊತ್ತವನ್ನು ಹೊಂದಿಸಿ ಶಾಂತನು ಶೆಟ್ಟಿ ಅವರ ಹೆಸರಿನಲ್ಲಿ ಶಾಶ್ವತ ನಿಧಿಯನ್ನು ರಚಿಸಲಾಗುವುದು. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವ ಉಡುಪಿ ತಾಲೂಕಿನ ಆತ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳ ಬಡ ರೋಗಿಗಳಿಗೆ ಸಹಾಯ ಮಾಡಲು ಈ ನಿಧಿಯನ್ನು ಮೀಸಲಿಡಲಾಗುವುದು.
ಗುರುವಾರ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಶಾಂತನು ಶೆಟ್ಟಿ ಚಾರಿಟಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಸೋಮನಾಥ ಶೆಟ್ಟಿ ಅವರು ನಿಧಿಯ ಮೊದಲ ಕಂತನ್ನು ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ ಅಧ್ಯಕ್ಷ ಡಾ. ರಂಜನ್ ಆರ್ ಪೈ ಮತ್ತು ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ. ಎಚ್ ಎಸ್ ಬಲ್ಲಾಳ್ ಸಮ್ಮುಖದಲ್ಲಿ ಮಾಹೆ ಮಣಿಪಾಲದ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಮತ್ತು ರಿಜಿಸ್ಟ್ರಾರ್ ಡಾ. ಗಿರಿಧರ್ ಕಿಣಿ ಅವರಿಗೆ ಹಸ್ತಾಂತರಿಸಿದರು. ಮಾಹೆ ಮಣಿಪಾಲದ ಸಹ ಕುಲಪತಿ ಡಾ.ಶರತ್ ಕುಮಾರ್ ರಾವ್, ಕೆಎಂಸಿ ಮಣಿಪಾಲದ ಡೀನ್ ಡಾ.ಪದ್ಮರಾಜ್ ಹೆಗ್ಡೆ, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಸಾರ್ವಜನಿಕ ಸಂಪರ್ಕ ಮತ್ತು ಸಂವಹನ ವಿಭಾಗದ ಉಪನಿರ್ದೇಶಕ ಸಚಿನ್ ಕಾರಂತ್, ಮಾಹೆ ಮಣಿಪಾಲದ ಪರವಾಗಿ ಉಪಸ್ಥಿತರಿದ್ದರು.
ಶಾಂತನು ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿಗಳಾದ ಜಿತೇಂದ್ರ ಹೆಗ್ಡೆ, ರಾಜಾರಾಂ ಹೆಗ್ಡೆ, ನಟರಾಜ್ ಹೆಗ್ಡೆ, ಗೋಪಿನಾಥ ಶೆಟ್ಟಿ, ಮತ್ತು ಅಶ್ವಿನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಮಾಹೆ ಮಣಿಪಾಲದ ರಿಜಿಸ್ಟ್ರಾರ್ ಡಾ. ಗಿರಿಧರ್ ಕಿಣಿ ಮತ್ತು ಶಾಂತನು ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಸೋಮನಾಥ ಶೆಟ್ಟಿ ಅವರು ಗುರುವಾರ ಅಧಿಕೃತವಾಗಿ ಒಪ್ಪಂದಕ್ಕೆ ಸಹಿ ಹಾಕಿದರು.
ಕಾರ್ಯಕ್ರಮದಲ್ಲಿ ಡಾ.ಎಚ್.ಎಸ್.ಬಲ್ಲಾಳ್ ಅವರು ಈ ಉದಾತ್ತ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಟ್ರಸ್ಟ್‌ನ ಕೊಡುಗೆಯನ್ನು ಅಭಿನಂದಿಸಿದರು ಮತ್ತು ಅದರ ಮಹತ್ವದ ಕುರಿತು ಮಾತನಾಡಿದರು. ಡಾ.ಪದ್ಮರಾಜ್ ಹೆಗ್ಡೆ ಸ್ವಾಗತಿಸಿ, ಡಾ.ಅವಿನಾಶ್ ಶೆಟ್ಟಿ ಒಪ್ಪಂದ ಮತ್ತು ಅದರ ಉದ್ದೇಶದ ಕುರಿತು ಮಾಹಿತಿ ನೀಡಿದರು. ಶಾಂತನು ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಶ್ರೀ ನಟರಾಜ್ ಹೆಗ್ಡೆ ನಿಧಿ ಮತ್ತು ಅದರ ಬಳಕೆಯ ನೀತಿಯ ಕುರಿತು ಅವಲೋಕನ ನೀಡಿದರು.
ಈ ಸಹಯೋಗವು ಮಾಹೆ ಮಣಿಪಾಲ ಮತ್ತು ಶಾಂತನು ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಎರಡರ ಆರ್ಥಿಕವಾಗಿ ಹಿಂದುಳಿದ ವರ್ಗದವರ ಮೇಲಿನ ಬದ್ಧತೆಯನ್ನು ತೋರಿಸುತ್ತದೆ. ಇದರಿಂದ ಮೇಲೆ ಉಲ್ಲೇಖಿಸಲಾದ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ವ್ಯಕ್ತಿಗಳ ಆರೋಗ್ಯ ಅಗತ್ಯಗಳನ್ನು ಪೂರೈಸಲಿದೆ. ಅಗತ್ಯವಿರುವವರಿಗೆ ಎಲ್ಲರಿಗೂ ಗುಣಮಟ್ಟದ ವೈದ್ಯಕೀಯ ಸೇವೆ ಲಭ್ಯವಾಗುವಂತೆ ಮಾಡಲು ಇಂತಹ ಪ್ರಯತ್ನಗಳನ್ನು ನೋಡುವುದು ಹರ್ಷದಾಯಕವಾಗಿದೆ.