ಕಲ್ಮಾಡಿ, ಆ. 16: 1972 ರಲ್ಲಿ ಪುಟ್ಟ ಆರಾಧನಾ ಕೇಂದ್ರವಾಗಿ ಆರಂಭಗೊಂಡ ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ದೇವಾಲಯವು 1991 ರಲ್ಲಿ ಸ್ವತಂತ್ರ ದೇವಾಲಯವಾಗಿ ಗುರುತಿಸಿಕೊಂಡಿತು. 1988 ಆಗಸ್ಟ್ 15 ರಂದು ವೆಲಂಕಣಿ ಮಾತೆಯ ಮೂರ್ತಿಯನ್ನು ತಮಿಳುನಾಡಿನ ವೆಲಂಕಣಿ ಪುಣ್ಯಕ್ಷೇತ್ರದಿಂದ ತಂದು ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು. ಅಂದಿನಿಂದ ಪ್ರಾರಂಭಗೊಂಡ ವೆಲಂಕಣಿ ಮಾತೆಯ ಆರಾಧನೆಯು ಸಾವಿರಾರು ಭಕ್ತರನ್ನು ಈ ಕ್ಷೇತ್ರಕ್ಕೆ ಆಕರ್ಷಿಸುತ್ತಿದೆ. ಶಿಥಿಲಾವಸ್ಥೆಯಲ್ಲಿದ್ದ ಈ ದೇವಾಲಯವನ್ನು 2018 ರಲ್ಲಿ ಹಡಗಿನ ರೂಪವನ್ನು ಹೋಲುವ ಬೃಹತ್ ದೇವಾಲಯವಾಗಿ ನಿರ್ಮಿಸಲಾಯಿತು. ಉಡುಪಿ ಧರ್ಮಪ್ರಾಂತ್ಯವು ಈ ಕ್ಷೇತ್ರವನ್ನು ಉಡುಪಿ ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರವೆಂದು ಆಗಸ್ಟ್ 15, 2022 ರಂದು ಘೋಷಿಸಿತು. ಈ ವರ್ಷ ಕೂಡ ಕಲ್ಮಾಡಿಯ ವೆಲಂಕಣಿ ಮಾತೆಯ ವಾರ್ಷಿಕ ಮಹೋತ್ಸವವ ಅಗಸ್ಟ್ 15 ರಂದು ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
ಪ್ರತಿ ವರ್ಷದಂತೆ ಸಾವಿರಾರು ಭಕ್ತಾಧಿಗಳು ಈ ಕ್ಷೇತ್ರಕ್ಕೆ ಭೇಟಿ ನೀಡಿ ಬಲಿಪೂಜೆಯಲ್ಲಿ ಪಾಲ್ಗೊಂಡರು. ಅಂದಿನ ಪ್ರಮುಖ ಬಲಿಪೂಜೆಯು ಬೆಳಗ್ಗೆ 10.00 ಗಂಟೆಗೆ ನೆರವೇರಿಸಲಾಯಿತು. ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೋರವರು ನೆರವೇರಿಸಿದರು.
ಅವರು ತಮ್ಮ ಪ್ರವಚನದಲ್ಲಿ ನಾವು ಕಷ್ಟಕಾಲದಲ್ಲಿ ಮಾತೆ ಮರಿಯಮ್ಮನವರನ್ನು ಕೂಗುತ್ತೇವೆ. ಅವರಲ್ಲಿ ಬಂದವರನ್ನು ಅವರು ಬರಿಗೈಯಲ್ಲಿ ಕಳುಹಿಸುವುದಿಲ್ಲ, ಅವರು ಮುಂದುವರೆದು, ಇಡೀ ಜಗತ್ತು ಮರಿಯಮ್ಮರನ್ನು ಮಾತೆಯೆಂದು ಕರೆಯುತ್ತದೆ. ಏಕೆ ಕರೆಯುತ್ತೆ ಮತ್ತು ಅವರಲ್ಲಿರುವ ಶ್ರೇಷ್ಠತೆ ಬಗ್ಗೆ ವಿವರಿಸುತ್ತಾ, ಮಾತೆಯು ದೇವರ ವಚನವನ್ನು ಇದ್ದ ಹಾಗೆ ಸ್ವೀಕರಿಸಿದ ತಾಯಿಯೆಂದರು. ಪುಣ್ಯಕ್ಷೇತ್ರದ ರೆಕ್ಟರ್ ಆದ ವಂ| ಬ್ಯಾಪ್ಟಿಸ್ಟ್ ಮಿನೇಜಸ್, ವಿಕಾರ್ ಜೆರಾಲ್ ವಂ| ಫರ್ಡಿನಾಂಡ್ ಗೊನ್ಸಾಲ್ವಿಸ್, ವಂ| ಚಾರ್ಲ್ಸ್ ಮಿನೇಜಸ್ ಹಾಗೂ ಧರ್ಮಪ್ರಾಂತ್ಯದ ಇತರ ಧರ್ಮಗುರುಗಳು ಪಾಲ್ಗೊಂಡರು. ಮಧ್ಯಾಹ್ನ 2.00 ಗಂಟೆಗೆ, ಸಾಯಂಕಾಲ 4.00 ಹಾಗೂ 6.00 ಗಂಟೆಗೆ ಇತರೆ ಬಲಿಪೂಜೆಗಳು ನಡೆದವು.