ಬ್ರಹ್ಮಾವರ: 1975 ಜೂನ್ ತಿಂಗಳಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿ, ದೇಶಾದ್ಯಂತ ರಾಜಕೀಯ ಮತ್ತು ಸಾಮಾಜಿಕ ಮುಖಂಡರನ್ನು ಜೈಲಿಗೆ ಹಾಕಲಾಗಿತ್ತು. ವಾಕ್ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿ ಪ್ರಜಾತಂತ್ರದ ಕಗ್ಗೊಲೆ ನಡೆದಾಗ, ಜೈಲಿನ ಕೋಣೆಯೊಳಗೆ ಸಹಕಾರಿ ಕ್ಷೇತ್ರದ ಸುಧಾರಣೆ ಮತ್ತು ವೃದ್ಧಿಯ ಬಗ್ಗೆ ಚಿಂತನ-ಮಂಥನ ನಡೆದ ಫಲ ಸ್ವರೂಪವಾಗಿ ವಕೀಲ್ ಸಾಬ್ ಎಂದೇ ಖ್ಯಾತರಾಗಿದ್ದ ಮಹಾರಾಷ್ಟ್ರದ ಪೂನಾ ಪ್ರಾಂತ್ಯದ ಸತಾರಾ ಜಿಲ್ಲೆಯ ಲಕ್ಷ್ಮಣ ರಾವ್ ಇನಾಂದಾರ್ ರವರು ಮಾಧವರಾವ್ ಗೋಡಬೋಲೆಯವರ ನೇತೃತ್ವದಲ್ಲಿ 1978 ಸೆಪ್ಟೆಂಬರ್ 15ರ ಅನಂತ ಚತುರ್ದಶಿಯ ದಿವಸ ಸಹಕಾರ ಭಾರತಿಯ ಸ್ಥಾಪಿಸಿದರು ಎಂದು ಮಂಗಳೂರು ವಿಭಾಗ ಪ್ರಮುಖ್ ಮೋಹನ್ ಕುಮಾರ್ ಕುಂಬ್ಳೆಕರ್ ಹೇಳಿದರು.
ಬ್ರಹ್ಮಾವರದ ಸಾಯ್ಬ್ರಕಟ್ಟೆಯ ಸ್ವಾಗತ ಸಭಾಂಗಣದಲ್ಲಿ ಬುಧವಾರ ನಡೆದ ಸಹಕಾರ ಭಾರತಿ ಇದರ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಸಂಸ್ಥಾಪಕರ ಪರಿಶ್ರಮ, ಪ್ರಾಮಾಣಿಕತೆ ಮತ್ತು ಜನಪರ ಕಾಳಜಿಯಿಂದಾಗಿ ಸಹಕಾರ ಭಾರತಿ ಇಂದು ದೇಶದ 27 ರಾಜ್ಯಗಳ 650ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ಸಂಘಟನಾತ್ಮಕವಾಗಿ ದೇಶದ ಅತಿದೊಡ್ಡ ಮತ್ತು ಏಕೈಕ ಸರಕಾರೇತರ ಸಹಕಾರಿ ಸಂಘಟನೆಯಾಗಿ ಬೆಳೆದು ನಿಂತಿದೆ ಎಂದರು.
ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರದೀಪ್ ಬಳ್ಳಾಲರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ಸಹಕಾರ ವ್ಯವಸ್ಥೆ ಬಲಗೊಂಡಾಗ ಗ್ರಾಮೀಣ ಭಾಗದ ಜನರ ಜೀವನದಲ್ಲಿ ಆರ್ಥಿಕತೆಯ ಜೊತೆಗೆ ಸಾಮಾಜಿಕ ದೃಷ್ಟಿಕೋನವು ಕೂಡ ವಿಕಸನಗೊಳ್ಳುತ್ತದೆ. ಈ ದಿಶೆಯಲ್ಲಿ ಸಹಕಾರ ಭಾರತಿಯ ಪಾತ್ರ ಮಹತ್ವವಾದುದು ಎಂದರು.
ಮುಖ್ಯ ಅತಿಥಿಗಳಾದ ಸಹಕಾರ ಭಾರತಿಯ ಉಡುಪಿ ಜಿಲ್ಲಾಧ್ಯಕ್ಷರಾದ ಸದಾಶಿವ ಶೆಟ್ಟಿ ಮಾತನಾಡುತ್ತಾ, ಸಹಕಾರ ಭಾರತಿಯು ಉಡುಪಿ ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ಪೂರ್ಣಪ್ರಮಾಣದ ತಾಲೂಕು ಸಮಿತಿಗಳ ಮೂಲಕ ಕಾರ್ಯಕರ್ತರಿಗೆ ಅಭ್ಯಾಸ ವರ್ಗ ಮತ್ತು ಸಂಸ್ಥಾಪನ ದಿನಾಚರಣೆಯ ಮೂಲಕ ಸಂಘಟನಾತ್ಮಕವಾಗಿ ರಚನಾತ್ಮಕವಾಗಿ ಆಂದೋಲನ ಪರವಾಗಿ ಮತ್ತು ಪ್ರಾತಿನಿಧ್ಯಾತ್ಮಕವಾಗಿ ಬಲಗೊಳ್ಳುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ರಾಷ್ಟ್ರೀಯ ಮತ್ಸ್ಯ ಪ್ರಕೋಷ್ಠದ ಸಹ ಸಂಚಾಲಕರಾದ ಮಂಜುನಾಥ್ ಕೆ ಮಾತನಾಡುತ್ತಾ , ಸಹಕಾರ ಸಂಘಗಳು ಸಾಮಾಜಿಕ ಹಾಗೂ ಆರ್ಥಿಕ ಶಕ್ತಿ ಕೇಂದ್ರಗಳಾಗಬೇಕು ಎಂದರು.
ಉಡುಪಿ ಜಿಲ್ಲಾ ಮಿಲ್ಕ್ ಪ್ರಕೋಷ್ಠದ ಸಂಚಾಲಕರು ಹಾಗೂ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕರಾದ ಸಾಣೂರು ನರಸಿಂಹ ಕಾಮತ್ ಮಾತನಾಡುತ್ತಾ, ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣದ ಸಂಕಲ್ಪವನ್ನು ಇಟ್ಟುಕೊಂಡಿರುವ ಸಹಕಾರ ಭಾರತಿ ಸಹಕಾರಿ ಕ್ಷೇತ್ರದಲ್ಲಿ ಶುದ್ಧೀಕರಣ ಮತ್ತು ಆಧುನೀಕರಣಕ್ಕಾಗಿ ವ್ಯವಸ್ಥಿತ ರೂಪದಲ್ಲಿ ದೇಶಾದ್ಯಂತ ನಿರಂತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.
ರಾಜ್ಯ ಸಹಕಾರ ಭಾರತಿಯ ಪೂರ್ಣಾವಧಿ ಕಾರ್ಯದರ್ಶಿ ಮಂಜುನಾಥ್ ಮಾತನಾಡುತ್ತಾ, ರಾಜ್ಯದ 31 ಜಿಲ್ಲೆಗಳಲ್ಲಿಯೂ ಸಹಕಾರ ಭಾರತೀಯ ಜಿಲ್ಲಾ ಸಮಿತಿಯು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ರಾಜ್ಯದ ಒಟ್ಟು 204 ತಾಲೂಕುಗಳಲ್ಲಿ 125 ತಾಲೂಕುಗಳಲ್ಲಿ ಪೂರ್ಣಪ್ರಮಾಣದ ತಾಲೂಕು ಸಮಿತಿಗಳ ರಚನೆಯಾಗಿದ್ದು, ಸದಸ್ಯತ ಅಭಿಯಾನದ ಮೂಲಕ ಸಹಕಾರ ಭಾರತಿ ಸಂಘಟನೆಯನ್ನು ಇತರ ತಾಲ್ಲೂಕುಗಳಲ್ಲಿಯೂ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಸಹಕಾರ ಭಾರತಿಯ ಬ್ರಹ್ಮಾವರ ತಾಲೂಕು ಅಧ್ಯಕ್ಷರಾದ ಅಶೋಕ್ ಪ್ರಭು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಬ್ರಹ್ಮಾವರ ತಾಲ್ಲೂಕಿನಲ್ಲಿ ಸಹಕಾರ ಭಾರತಿ ಸಂಘಟನೆ ಇನ್ನಷ್ಟು ವಿಸ್ತರಿಸಲು ಕಾರ್ಯಕರ್ತರು ಸಕ್ರಿಯರಾಗಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಉಡುಪಿ ಜಿಲ್ಲಾ ಗ್ರಾಮ ವಿಕಾಸ ಪ್ರಮುಖ ಪ್ರಮೋದ್, ಮಹಿಳಾ ಪ್ರಮುಖರಾದ ಶಾಂತಾ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸತೀಶ್ ಕೆ ನಾಯ್ಕ್ ಸ್ವಾಗತಿಸಿ, ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ಸುದರ್ಶನ್ ವಂದಿಸಿದರು.