ಉಡುಪಿ, ಆ. 8: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿ., ಉಡುಪಿ ಹಾಗೂ ಸಹಕಾರ ಇಲಾಖೆ, ಉಡುಪಿ ಜಿಲ್ಲೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಪ್ರಾಥಮಿಕ ಮೀನುಗಾರರ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಮುಖ್ಯಕಾರ್ಯನಿರ್ವಾಹಕರಿಗೆ ಆಡಳಿತ ನಿರ್ವಹಣಾ ತರಬೇತಿ ಶಿಬಿರ ಬಡಗಬೆಟ್ಟು ಕ್ರೆಡಿಟ್ ಕೊ- ಆಪರೇಟಿವ್ ಸೊಸೈಟಿ ಲಿ. ಉಡುಪಿ ಇದರ ಜಗನ್ನಾಥ ಸಭಾಭವನದಲ್ಲಿ ಮಂಗಳವಾರ ನಡೆಯಿತು. ಉಡುಪಿ ಶಾಸಕ ಯಶ್‌ಪಾಲ್ ಎ. ಸುವರ್ಣ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ ವಹಿಸಿದ್ದರು. ಅತಿಥಿ ಉಪನ್ಯಾಸಕರಾದ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕಿ ಅಂಜನಾದೇವಿ ಇಲಾಖೆ ವತಿಯಿಂದ ಸದಸ್ಯರಿಗೆ ವಿವಿಧ ಸಾಲ ಸೌಲಭ್ಯ, ವಾಹನ ಸಾಲ, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಸಬ್ಸಿಡಿ ಸಾಲ ಸೌಲಭ್ಯ, ವಸತಿ ಯೋಜನೆ, ಮತ್ಸ್ಯ ಆಶ್ರಯ ಯೋಜನೆ, ಅಪಘಾತ ವಿಮೆ ಸೌಲಭ್ಯ ಬಗ್ಗೆ ಮಾಹಿತಿ ನೀಡಿದರು. ಸಹಕಾರ ಸಂಘಗಳ ಉಪನಿಭಂದಕರ ಕಚೇರಿಯ ಅಧೀಕ್ಷರಾದ ಗೋಪಾಲ್ ಅವರು ಮಂಗಳೂರು ಸಹಕಾರ ಸಂಘಗಳ ಇತ್ತೀಚಿನ ಕಾಯ್ದ ತಿದ್ದುಪಡಿ, ಆಡಳಿತ ಮಂಡಳಿಯ ಸದಸ್ಯರ ಅಧಿಕಾರ, ಚುನಾವಣೆಯ ಸಮಯದಲ್ಲಿ ಮುಖ್ಯಕಾರ್ಯನಿರ್ವಹಕರ ಕರ್ತವ್ಯ, ಜವಾಬ್ಧಾರಿ ನಿರ್ವಹಣೆ ಕುರಿತು ವಿಚಾರಗಳನ್ನು ತಿಳಿಸಿದರು.
ಜಿಲ್ಲಾ ಯೂನಿಯನ್ ಉಪಾಧ್ಯಕ್ಷರಾದ ಅಶೋಕ ಕುಮಾರ್ ಬಲ್ಲಾಳ ನಿರ್ದೇಶಕರಾದ ಸುರೇಶ್ ರಾವ್, ಕೊರಗ ಪೂಜಾರಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಲಪ್ಪ ಕೋಡಿಹಳ್ಳಿ, ಸಹಕಾರ ಇಲಾಖೆ ಮತ್ತು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಮೀನುಗಾರರ ಸಹಕಾರ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.