ಬೆಳ್ಮಣ್, ಆ. 8: ಬಿಲ್ಲವ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಮುಂಡ್ಕೂರು-ಮುಲ್ಲಡ್ಕ-ಇನ್ನಾ ಇದರ ನೇತೃತ್ವದಲ್ಲಿ ಕುಟುಂಬ ಸಮ್ಮಿಲನ ಹಾಗೂ ಆಟಿಡೊಂಜಿ ಕೂಟ ಕಾರ್ಯಕ್ರಮ ಮುಂಡ್ಕೂರು ಸಫಳಿಗ ಸಮುದಾಯ ಭವನದಲ್ಲಿ ನಡೆಯಿತು. ಪೊಸ್ರಾಲ್ ನಾರಾಯಣ ಗುರು ಸೇವಾ ಸಂಘದ ಗೌರವಾಧ್ಯಕ್ಷ ಶ್ರೀಧರ್ ಸನಿಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಟಿ ತಿಂಗಳು ಆರೋಗ್ಯದ ದೃಷ್ಟಿಯಿಂದ ಬಹಳ ವಿಶೇಷವಾದದ್ದು. ಈ ಸಂದರ್ಭ ನಾವು ಸೇವಿಸುವ ಆಹಾರವು ಆರೋಗ್ಯ ವೃದ್ಧಿಸುತ್ತದೆ. ಕರಾವಳಿಯಲ್ಲಿ ಆಟಿ ತಿಂಗಳನ್ನು ವಿಶೇಷ ರೀತಿಯಲ್ಲಿ ಆಚರಣೆ ಮಾಡುತ್ತೇವೆ ಎಂದರು.
ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಯಶೋಧಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಹರೀಶ್ ಪೂಜಾರಿ, ಗೌರವಾಧ್ಯಕ್ಷ ಸುರೇಶ್ ಪೂಜಾರಿ, ಸಂಚಾಲಕ ಉದಯ ಪೂಜಾರಿ, ಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಕೋಶಾಧಿಕಾರಿ ಸುಕೇಶ್ ಪೂಜಾರಿ, ಸಂಘಟನಾ ಕಾರ್ಯದರ್ಶಿ ನಿಶಾಂತ್ ತೋಟಮನೆ, ಗೌರವ ಸಲಹೆಗಾರರಾದ ಕರಿಯ ಪೂಜಾರಿ, ದಯಾನಂದ ಕೋಟ್ಯಾನ್, ಗ್ರಾಮ ಪಂಚಾಯತ್ ಸದಸ್ಯರಾದ ದೇವಪ್ಪ ಸಪಳಿಗ, ಶಶಿಕಲಾ ಕೃಷ್ಣ ಸಾಲಿಯಾನ್, ಉದ್ಯಮಿ ವಾಸು ಅಂಚನ್ ತೋಟಮನೆ, ಮಹಿಳಾ ವೇದಿಕೆಯ ಗೌರವಾಧ್ಯಕ್ಷೆ ಮಲ್ಲಿಕಾ, ಕೋಶಾಧಿಕಾರಿ ರಂಜನಿ, ಗೌರವ ಸಲಹೆಗಾರ್ತಿ ಶಶಿಕಲಾ ಸಂಕಲಕರಿಯ ಉಪಸ್ಥಿತರಿದ್ದರು.
ಮಕ್ಕಳಿಗೆ, ಪುರುಷರಿಗೆ ಮತ್ತು ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಬಿಲ್ಲವ ಮಹಿಳಾ ವೇದಿಕೆಯ ಸದಸ್ಯರೇ ತಯಾರಿಸಿದ ಸುಮಾರು 40 ಬಗೆಯ ವಿಶೇಷ ಆಹಾರ ಪದಾರ್ಥ ತಿನಿಸುಗಳನ್ನು ಉಣಬಡಿಸಲಾಯಿತು.