ಕೋಟ, ಆ. 8: ಸ್ವಾತಂತ್ರ್ಯಕ್ಕಾಗಿ ನಮ್ಮ ಪೂರ್ವಜರ ತ್ಯಾಗ ಬಲಿದಾನದಿಂದಾಗಿ ಪರಕೀಯರಿಂದ ಮುಕ್ತಿ ಪಡೆಯಲು ಸಾಧ್ಯವಾಯಿತು, ಪ್ರತಿಯೊಬ್ಬ ಭಾರತೀಯನು ತನ್ನ ದೇಶದ ಮೇಲೆ ಪ್ರೀತಿಯನ್ನಿರಿಸಿಕೊಂಡು ತಮ್ಮ ಮಕ್ಕಳಿಗೂ ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರಪ್ರೇಮದ ಬಗ್ಗೆ ಅರಿವು ಮೂಡಿಸಬೇಕು. ಧರ್ಮ, ಭಾಷೆ, ಸಂಸ್ಕೃತಿ ಆಚರಣೆ ಸಂಪ್ರದಾಯಗಳು ವಿಭಿನ್ನವಾದರೂ ನಾವೆಲ್ಲರೂ ಒಂದು ಎಂದು ಸಾರುವ ದೇಶ ಎನ್ನುವ ಶಬ್ಧದಲ್ಲಿ ಭಾರತೀಯರ ಭಾವನೆ ಅಡಗಿದೆ ಎಂದು ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹೇಳಿದರು. ಅವರು ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ(ರಿ.) ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್, ಜೇಸಿಐ ಕಲ್ಯಾಣಪುರ, ಕೋಟತಟ್ಟು ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ, ಯು ಚಾನೆಲ್ ಸಹಯೋಗದಲ್ಲಿ ನಡೆದ ಸಮೂಹ ದೇಶಭಕ್ತಿ ಗೀತೆ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಕೋಟತಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಾಸು ಪೂಜಾರಿ, ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ ಆಚಾರ್ಯ, ಜೇಸಿಐ ಕಲ್ಯಾಣಪುರ ಅಧ್ಯಕ್ಷೆ ಅನಿತಾ ನರೇಂದ್ರ, ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಮಾಹಿತಿ ಕೇಂದ್ರದ ಮೇಲ್ವಿಚಾರಕಿ ಶೈಲಜಾ ಕೆ.ಎನ್., ಜ್ಯೂನಿಯರ್ ಜೇಸಿಐ ಅಧ್ಯಕ್ಷ ನಿರಂತರ ಉಪಸ್ಥಿತರಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ನಿರೂಪಿಸಿದರು.