ಉಡುಪಿ, ಆ. 7: ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನ ವಿಡಿಯೋ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಸಂದರ್ಭದಲ್ಲಿಯೇ ತರಾತುರಿಯಲ್ಲಿ ಸಿಐಡಿಗೆ ವರ್ಗಾಯಿಸುವ ಮೂಲಕ ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ ರಾಜ್ಯ ಸರಕಾರ ಮಾಡುತ್ತಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದ್ದಾರೆ.
ರಾಜ್ಯದಾದ್ಯಂತ ಈ ಪ್ರಕರಣದ ಬಗ್ಗೆ ತೀವ್ರ ಜನಾಕ್ರೋಶ, ಪ್ರತಿಭಟನೆಗೆ ಮಣಿದ ಸರಕಾರ ಈ ಹಿಂದೆ ತನಿಖಾಧಿಕಾರಿಯನ್ನು ಬದಲಾಯಿಸಿದ ಬಳಿಕ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ತನಿಖೆ ತೀವ್ರಗೊಳಿಸಿ ಪ್ರಕರಣದ ಸಂತ್ರಸ್ಥ ಹಾಗೂ ಆರೋಪಿ ವಿದ್ಯಾರ್ಥಿನಿಯರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೇಳಿಕೆ ಪಡೆಯುವ ಮೂಲಕ ಹಲವು ಪೂರಕ ಸಾಕ್ಷ್ಯಗಳನ್ನು ಸಂಗ್ರಹಿಸಿತ್ತು.
ಮಾತ್ರವಲ್ಲದೇ ಆರೋಪಿ ವಿದ್ಯಾರ್ಥಿನಿಯ ತಂದೆ ನಿಷೇಧಿತ ಪಿಎಫ್ ಐ ಸಂಘಟನೆಯ ಸಕ್ರಿಯ ಸದಸ್ಯ ಎಂಬ ಮಾಹಿತಿಗಳು ಕೂಡ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಇದೀಗ ಜಿಲ್ಲಾ ಪೊಲೀಸರ ತನಿಖೆ ಪೂರ್ಣಗೊಳ್ಳುವ ಮುನ್ನವೇ ತರಾತುರಿಯಲ್ಲಿ ಸಿಐಡಿಗೆ ವರ್ಗಾಯಿಸುವ ಮೂಲಕ ರಾಜ್ಯ ಸರಕಾರದ ನಡೆ ಮತ್ತೊಮ್ಮೆ ಗೊಂದಲ ಸೃಷ್ಟಿಸಿದೆ. ಪ್ರಕರಣದ ಆರಂಭದ ದಿನದಿಂದಲೂ ಪೊಲೀಸ್ ಇಲಾಖೆಗೆ ಪ್ರತಿ ಹಂತದಲ್ಲೂ ಪ್ರಭಾವ ಬೀರುವ ಯತ್ನ ಮಾಡಿದ್ದ ಸರಕಾರ ಇದೀಗ ಆರೋಪಿಗಳನ್ನು ರಕ್ಷಿಸುವ ಸಲುವಾಗಿಯೇ ಸಿಐಡಿಗೆ ವರ್ಗಾಯಿಸಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ನೇರ ಆರೋಪ ಮಾಡಿದ್ದಾರೆ.