ಕೋಟ, ಆ. 7: ನಮ್ಮ ಸಂಸ್ಕ್ರತಿಯ ಸೊಗಡು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಈ ನೆನಪುಗಳ ಬಲದಿಂದಲೇ ಸಾಗಿ ಬರಬೇಕು. ನಮ್ಮ ಪೂರ್ವಜರ ಆಹಾರ ಪದ್ಧತಿಯನ್ನು ನಮ್ಮ ಮುಂದಿನ ಜನಾಂಗಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಯುವವಾಹಿನಿ (ರಿ.) ಯಡ್ತಾಡಿ ಘಟಕ ವಿಶಿಷ್ಟ ‘ಹಳೆ ಹಂಬ್ಲು’ (ಆಸಾಡಿಯಂಗ್ ಒಂದ್ ದಿನ) ಕಾರ್ಯಕ್ರಮ ನಡೆಯಿತು. ಈ ಬದುಕು ಅಲ್ಪ ಅನಿಸಿದರೂ ಸಂಭ್ರಮಿಸುವ ಸಂಭ್ರಮ ನಮ್ಮಲಿಲ್ಲ, ಮುಂದಿನ ಯುವ ಮನಸ್ಸುಗಳಿಗೆ ಇದನ್ನು ತಲುಪಿಸಿ ನಮ್ಮ ಪೂರ್ವಜರ ಆಹಾರ ಪದ್ಧತಿಗೆ ನೀಡಿದ ಕೊಡುಗೆಗಳನ್ನು ನಮ್ಮ ಮುಂದಿನ ಜನಾಂಗಕ್ಕೆ ತಿಳಿಸುವ ಜವಾಬ್ದಾರಿ ನಮ್ಮ ಮೇಲಿರುವುದು ಸುಳ್ಳಲ್ಲ, ಈ ನಿಟ್ಟಿನಲ್ಲಿ ಹಳೆ ಹಂಬ್ಲನೆಲ್ಲ ಪುನಃ ನೆನಪು ಮಾಡುವ ಉದ್ದೇಶದಿಂದ ಹಳಿ ಹಂಬ್ಲ್ ಕಾರ್ಯಕ್ರಮದ ಆಯೋಜನೆ ಮಾಡಲಾಗಿತ್ತು.
ಗಮನ ಸೆಳೆದ ತಿಂಡಿ ತಿನಿಸುಗಳು
ಮಹಿಳೆಯರು ವಿಶೇಷ ಮುತುರ್ವಜಿಯಿಂದ ಸುಮಾರು ೪೬ ಬಗೆ ಬಗೆಯ ತಿಂಡಿ ತಿನಿಸುಗಳನ್ನು ಸಿದ್ದಪಡಿಸಿದ್ದರು. ಶುಂಠಿ ಕಾಳ್‌ಮೆಣ್ಸ್ನ್ ಕಸಾಯಿ, ಪತ್ರೋಡಿ, ಕುಣಿಲ್ ಹಿಟ್, ಗೆಂಡ್ದ್ ಹಿಟ್, ಶಕ್ಹಿಟ್, ಅಪ್ದಿಟ್, ಅಕ್ಕಿಹೊಡಿ, ಚಕ್ತಿ ಸಪ್ಪಿನ್ ತಾಳ್ಳ್, ಬದ್ನಿ ಕಾಯ್ ಚೆಟ್ನಿ, ಕ್ಯಾನಿಗೆಂಡಿ ಹಿಟ್, ಹೊರಳಿ ಬಜ್ಜಿ, ಚಟ್ಲಿ ಉಪ್ಪಿನ ಹುಡಿ, ಹಾಗಲ ಕಾಯಿ ಪಲ್ಯ,ಹೆಲ್ಸಿನ್ ಕಾಯಿ ಪದಾರ್ಥ, ಶುಂಠಿ ಉಚಿಡಿ, ಧೂಳ್ ಉಪಿಇನ ಹುಡಿ, ಅಕ್ಕಿ ಹುಂಡಿ ಮೆತ್ತಿ ಗಂಜಿ ಹೀಗೆ ಇನ್ನಿತರ ಹಲವು ಬಗೆಯ ತಿನಿಸುಗಳನ್ನು ಸವಿದು ಸಂಭ್ರಮಿಸಿದರು. ಜೊತೆಗೆ ಹಳೆಯ ಕಾಲದ ಆಟೋಟ ಸ್ಪರ್ಧೆಗಳು ಎಲ್ಲರ ಗಮನ ಸೆಳೆಯಿತು.
ಹಳೆ ತಲೆಮಾರುಗಳ ಕೊಡುಗೆ ಅವಿಸ್ಮರಣೀಯ: ಹರೀಶ್ ಕೆ ಪೂಜಾರಿ
ಹಳೆ ತಲೆಮಾರುಗಳ ಜೀವನ ಪದ್ದತಿ ಜೊತೆಗೆ ಶಿಸ್ತಿನ ಸಹಬಾಳ್ವೆ ಇಂದು ನಮಗೆಲ್ಲ ಪೇರಣೆ. ಆ ಕಾಲದಲ್ಲಿ ಅವರು ಆಚರಿಸುತ್ತಿದ್ದ ಸಂಸ್ಕೃತಿ- ಸಂಪ್ರದಾಯಗಳು ಇಂದಿಗೂ ನಾವು ಮುನ್ನೆಡಿಸಿಕೊಂಡು ಅರ್ಥಪೂರ್ಣ ಬದುಕು ಸಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿ ಯುವವಾಹಿನಿ ಕೇಂದ್ರ ಸಮತಿಯ ಪ್ರಥಮ ಉಪಾಧ್ಯಕ್ಷ ಹರೀಶ್ ಕೆ ಪೂಜಾರಿ ಹೇಳಿದರು.
ಸೂಲಗಿತ್ತಿ ಶ್ರೀಮತಿ ಬೀರು ಪೂಜಾರ್ತಿಗೆ ಗೌರವಾರ್ಪಣೆ
ಯಡ್ತಾಡಿ ಭಾಗದಲ್ಲಿ ಸೂಲಗಿತ್ತಿಯಾಗಿ ಹಲವಾರು ವರ್ಷದಿಂದ ಸೇವೆ ಸಲ್ಲಿಸಿದ ಹಾಗೂ ಶೋಭಾನೆ ಗೀತೆಗೆ ಧ್ವನಿಯಾಗುವುದರ ಮೂಲಕ ಜನಪದ ಪರಂಪರೆಯನ್ನು ಉಳಿಸಿ ಬೆಳೆಸಿದ ಬೀರು ಪೂಜಾರ್ತಿ ಅವರನ್ನು ಘಟಕದ ಮೂಲಕ ಗೌರವಿಸಲಾಯಿತು. ಯಡ್ತಾಡಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಬಿ.ಕೆ ಶ್ರೀನಿವಾಸ ಪೂಜಾರಿ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಅವರ ಚಿಕಿತ್ಸೆ ವೆಚ್ಚಕ್ಕಾಗಿ ಸಹಾಯಧನವನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.
ಯುವವಾಹಿನಿ ಯಡ್ತಾಡಿ ಘಟಕದ ಅಧ್ಯಕ್ಷ ರಮೇಶ್ ಪೂಜಾರಿ, ಕಾರ್ಯದರ್ಶಿ ಅಜಿತ್ ಕುಮಾರ್ ಎಸ್, ಸಾಹಿತಿ-ಶಿಕ್ಷಕ ನರೇಂದ್ರ ಕುಮಾರ್ ಕೋಟ, ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪೂಜಾರಿ ಬೈಕಾಡಿ, ಬ್ರಹ್ಮಾವರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಜ್ಯೋತಿ ಕೃಷ್ಣ ಪೂಜಾರಿ, ಯಡ್ತಾಡಿ ಘಟಕದ ಮಹಿಳಾ ಸಂಘಟನ ಕಾರ್ಯದರ್ಶಿ ಉಷಾ ಪೂಜಾರಿ, ಮಾಜಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.