ಉಡುಪಿ, ಆ. 7: ಕಂಪ್ಯೂಟರ್ ಕೀಲಿಮಣೆ ಜನಕ ಪ್ರೊ. ಕೆ. ಪಿ. ರಾವ್ ಪ್ರಬುದ್ಧ ಮನಸ್ಸಿನ ಬಹುಮುಖ ವ್ಯಕ್ತಿತ್ವದವರು ಎಂದು ಖ್ಯಾತ ಮನೋವೈದ್ಯ ಡಾ. ಪಿ. ವಿ. ಭಂಡಾರಿ ಹೇಳಿದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಉಡುಪಿ ತಾಲೂಕು ಘಟಕ ಆಶ್ರಯದಲ್ಲಿ ನಾಡೋಜ ಪ್ರೊ. ಕೆ. ಪಿ. ರಾವ್ ಅಭಿನಂದನ ಸಮಿತಿ ವತಿಯಿಂದ ಭಾನುವಾರ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದ ಪ್ರೊ. ಕೆ. ಪಿ. ರಾವ್ ಅಭಿನಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಮ್ಮ ವ್ಯಕ್ತಿತ್ವಕ್ಕೆ ಹೋಲುವ ಸರಳ ನಡೆ ನುಡಿಯ ಬದುಕು ಪ್ರೊ. ರಾವ್ ಅವರದು ಎಂದು ಡಾ. ಪಿ. ವಿ. ಭಂಡಾರಿ ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಮೂಡುಬಿದಿರೆ ಜೈನ ಮಠ ಭಟ್ಟಾರಕ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ, ತುಳು ಸೇರಿದಂತೆ ಅನೇಕ ಭಾರತೀಯ ಭಾಷೆಗಳನ್ನು ಕಂಪ್ಯೂಟರಿಗೆ ಅಳವಡಿಸಿರುವ ಪ್ರೊ. ಕೆ. ಪಿ. ರಾವ್ ಸಾಧನೆ ಅಪೂರ್ವ. ಸಾತ್ವಿಕ ಭಾಷೆ, ಮತಿ ಅಕ್ಷರಕ್ಕೆ ಮೂಡಲಿ ಎಂದವರು ಆಶಿಸಿದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಪ್ರೊ. ಕೆ. ಪಿ.ರಾವ್ ಅವರನ್ನು ವಿಶ್ವ ಕನ್ನಡ ಪುರೋಹಿತ ಎಂದು ಬಣ್ಣಿಸಿದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮ ಶುಭ ಹಾರೈಸಿದರು. ಪ್ರೊ. ಕೆ.ಪಿ. ರಾವ್ ಅಭಿನಂದನ ಸಮಿತಿ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ ಇದ್ದರು.
ಅಭಿನಂದನ ಸಮಿತಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ, ಕಾರ್ಯದರ್ಶಿ ಜನಾರ್ದನ ಕೊಡವೂರು ವಂದಿಸಿದರು. ಶಿಕ್ಷಕ ಜಿ.ಪಿ. ಪ್ರಭಾಕರ ತುಮರಿ ನಿರೂಪಿಸಿದರು. ಬಳಿಕ ಕಂಪ್ಯೂಟರ್ ಮತ್ತು ಕೆ.ಪಿ. ರಾವ್ ವಿಷಯ ಬಗ್ಗೆ ವಿಶ್ವ ಕನ್ನಡ ಪತ್ರಿಕೆ ಸಂಪಾದಕ ಡಾ. ಯು ಬಿ ಪವನಜ, ಕೆ. ಪಿ. ರಾವ್ ಬದುಕು ಮತ್ತು ವರ್ಣಕ ಕಾದಂಬರಿ ಬಗ್ಗೆ ಮಣಿಪಾಲ ಮಾಹೆ ಗಾಂಧಿಯನ್ ಸೆಂಟರ್ ಫಾರ್ ಫಿಲಸಾಫಿಕಲ್ ಆರ್ಟ್ಸ್ ಆ್ಯಂಡ್ ಸೆಂಟರ್ ಮುಖ್ಯಸ್ಥ ಪ್ರೊ. ವರದೇಶ ಹಿರೇಗಂಗೆ ವಿಷಯ ಮಂಡಿಸಿದರು.
ಕೆ ಪಿ ರಾವ್ ಒಡನಾಟ ಬಗ್ಗೆ ಹಿರಿಯ ವಿದ್ವಾಂಸ ಡಾ. ಎನ್. ಟಿ. ಭಟ್ ಮಾತನಾಡಿದರು. ಬಳಿಕ ನಡೆದ ಕೆ. ಪಿ. ರಾವ್ ಅವರೊಂದಿಗೆ ಮಾತುಕತೆಯಲ್ಲಿ ಡಾ| ಪಾದೆಕಲ್ಲು ವಿಷ್ಣು ಭಟ್, ಡಾ| ಕೆ. ಮಹಾಲಿಂಗ ಭಟ್, ಪ್ರೊ. ನೀತಾ ಇನಾಂದಾರ್, ಡಾ. ಎಚ್. ಉದಯ ಶಂಕರ ಎಚ್. ಎನ್., ಸುಶ್ಮಿತಾ ಶೆಟ್ಟಿ, ಪಲ್ಲವಿ ಕೊಡಗು ಭಾಗವಹಿಸಿದ್ದರು. ಪೂರ್ಣಿಮಾ ಜನಾರ್ದನ್ ನಿರೂಪಿಸಿದರು. ಗಾಯಕ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಅವರಿಂದ ಹಾಡುಗಾರಿಕೆ ನಡೆಯಿತು. ಸರಿಗಮ ಭಾರತಿ ಪರ್ಕಳ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಚಿಂತನಶೀಲತೆ ಇಲ್ಲದ ತನ್ಮಯತೆ ಮತ್ತು ತನ್ಮಯತೆ ಇಲ್ಲದೆ ಚಿಂತನಶೀಲನೆ ಎರಡೂ ವ್ಯರ್ಥ. ಅವೆರಡೂ ಪರಸ್ಪರ ಅವಿನಾಭಾವ ಸಂಬಂಧ ಹೊಂದಿದೆ. ಆ ನಿಟ್ಟಿನಲ್ಲಿ ಅವಲೋಕಿಸಿದರೆ ನಾಡೋಜ ಪ್ರೊ. ಕೆ.ಪಿ. ರಾವ್ ಅವರು ವಿದ್ವತ್ತು ಮತ್ತು ಶ್ರದ್ಧೆ ಮುಪ್ಪುರಿಗೊಂಡ ಅನುಭವಿ ಎಂದು ಹಿರಿಯ ಸಾಹಿತಿ ಜಯಂತ ಕಾಯ್ಕಿಣಿ ಬಣ್ಣಿಸಿದರು. ಪ್ರೊ. ಕೆ.ಪಿ. ರಾವ್ ಬಗ್ಗೆ ಅಭಿನಂದನ ನುಡಿಗಳನ್ನಾಡಿದ ಅವರು, ಕೆ. ಪಿ. ರಾವ್ ಅವರು ಬಾಲ್ಯದಲ್ಲಿ 7 ಮತ್ತು 8ನೇ ತರಗತಿ ಪಾಠಗಳನ್ನು ಯಕ್ಷಗಾನ ಶೈಲಿಯಲ್ಲಿ ಓದಿಕೊಂಡು ಕಂಠಪಾಠ ಮಾಡಿ ಪುಸ್ತಕಗಳನ್ನು ವಾಪಾಸು ಕೊಡುತ್ತಿದ್ದರು. ಏಕತಾನತೆಯ ಜೀವನ ನಡೆಸದೇ ಸಂಗೀತ, ಸಿನೆಮಾ, ವಿಜ್ಞಾನ ಹೀಗೆ ಪ್ರತೀ ಕ್ಷೇತ್ರದಲ್ಲೂ ಅಸಕ್ತಿ ವಹಿಸಿ ವೈಶಿಷ್ಟ್ಯಪೂರ್ಣ ಬದುಕು ನಡೆಸಿದವರು ಕೆ.ಪಿ. ರಾವ್.
ನಾವೆಲ್ಲ ಕಂಪ್ಯೂಟರ್ ಪದ ಕೇಳುವ ಹೊತ್ತಿನಲ್ಲಿ 80ರ ದಶಕದಲ್ಲೇ ಅವರು ತನ್ನ ಮನೆಯ ಬೆಡ್ ರೂಮಿನಲ್ಲಿ 5 ಕಂಪ್ಯೂಟರ್ ಗಳನ್ನು ಹೊಂದಿದ್ದು, ಪ್ರತಿಯೊಂದನ್ನೂ ಬಿಚ್ಚಿಟ್ಟು ಮರು ಜೋಡಿಸುತ್ತಿದ್ದರು. ಪ್ರತಿಯೊಂದು ವಿಚಾರವನ್ನೂ ಕುತೂಹಲಕಾರಿಯಾಗಿ ಯೋಚಿಸುವ, ಅನುಭವಿಸುವ ಸ್ವಭಾವದ ಅವರು, ವಿದೇಶಗಳಿಗೆ ಹೋದಾಗೆಲ್ಲಾ ಅಲ್ಲಿನ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿದವರು ಎಂದರು. ಪ್ರೊ. ರಾವ್ ತನ್ನ ಆತ್ಮಕಥನ ಮುಂದುವರಿಸುವಂತೆ ಕಾಯ್ಕಿಣಿ ಮನವಿ ಮಾಡಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಾಡೋಜ ಪ್ರೊ. ಕೆ. ಪಿ. ರಾವ್, ದೇವರು ಮತ್ತು ಭಾಷೆ ಕಣ್ಣಿಗೆ ಕಾಣುವುದಿಲ್ಲ ಮತ್ತು ಹಿಡಿತಕ್ಕೆ ಸಿಗುವುದಿಲ್ಲ. ಅದರೆ, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಶಕ್ತಿ ಭಾಷೆ ಮತ್ತು ದೇವರಿಗಿದೆ. ಪ್ರಾಣಿ ಸಂಕುಲ ಭಾಷೆ ಕಲಿಯುವುದು ಮೊದಲಿಗೆ ತಾಯಿಯಿಂದ. ಪರಸ್ಪರ ಅರ್ಥ ಮಾಡಿಕೊಳ್ಳಲು ಇರುವ ಮಾಧ್ಯಮ ಭಾಷೆ. ಎಲ್ಲರನ್ನೂ ಒಳಗೊಳ್ಳುವ ಶಕ್ತಿ ಭಾಷೆಗಿದೆ ಎಂದರು. ಅಭಿನಂದನ ಸಮಿತಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ವಿಮರ್ಶಕ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ, ಆರ್.ಆರ್.ಸಿ ನಿರ್ದೇಶಕ ಡಾ| ಜಗದೀಶ ಶೆಟ್ಟಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಅಧ್ಯಕ್ಷ ರವಿರಾಜ್ ಎಚ್ .ಪಿ. ಸ್ವಾಗತಿಸಿ, ಕೋಶಾಧಿಕಾರಿ ರಾಜೇಶ ಭಟ್ ಪಣಿಯಾಡಿ ವಂದಿಸಿದರು. ವಿಶ್ರಾಂತ ಮುಖ್ಯೋಪಾಧ್ಯಾಯ ಮುರಳಿ ಕಡೆಕಾರ್ ನಿರೂಪಿಸಿದರು. ವಿವಿಧ ಸಂಘಸಂಸ್ಥೆಗಳು ಮತ್ತು ಅಭಿಮಾನಿಗಳಿಂದ ಪ್ರೊ. ಕೆ. ಪಿ. ರಾವ್ ಅವರಿಗೆ ಗೌರವಾರ್ಪಣೆ ನಡೆಯಿತು.