ಉಡುಪಿ: ಯುವ ಜನರು ಸ್ವ-ಉದ್ಯೋಗ ಕೈಗೊಳ್ಳುವುದರಿಂದ ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬಿಗಳಾಗಬಹುದೆಂದು ಕೈಗಾರಿಕ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಅರವಿಂದ ಡಿ. ಬಾಳೇರಿ ಕರೆ ನೀಡಿದರು.
ಅವರು ಆದಿ ಉಡುಪಿಯ ಅಂಬೇಡ್ಕರ್ ಭವನದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಬೆಂಗಳೂರು, ಟೆಕ್ನಿಕಲ್ ಕನ್ಸಲ್ಟೆನ್ಸಿ ಸರ್ವಿಸಸ್ ಆರ್ಗನೈಸೇಷನ್ ಆಫ್ ಕರ್ನಾಟಕ, ಪ.ಜಾತಿ, ಪ.ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಂಗಳೂರು, ಪರಿಶಿಷ್ಟ ಜಾತಿ ವರ್ಗಗಳ ಕೈಗಾರಿಕೋದ್ಯಮಗಳ ಸಂಘ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಯುವಜನರಿಗೆ ಉದ್ಯೋಗ ಒದಗಿಸಿ, ನಿರುದ್ಯೋಗ ನಿವಾರಣೆಗೆ ಅನೇಕ ಯೋಜನೆ ಮತ್ತು ಕರ‍್ಯಕ್ರಮಗಳನ್ನು ಹಮ್ಮಿಕೊಂಡಿದೆ ಇದನ್ನು ಸದ್ಭಳಕೆ ಮಾಡಿಕೊಂಡು ಉದ್ದಿಮೆ ಕೈಗೊಳ್ಳುವುದರೊಂದಿಗೆ ಆರ್ಥಿಕವಾಗಿ ಸದೃಢರಾಗಿ ದೇಶದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಬೇಕೆಂದು ಕರೆ ನೀಡಿದರು.
ಸಹಾಯಕ ನಿರ್ದೇಶಕ ವಾಮನ ನಾಯ್ಕ ಮಾತನಾಡಿ ಯುವಜನರು ಕೌಶಲ್ಯ ಚಟುವಟಿಕೆಯನ್ನು ಮೈಗೂಡಿಸಿಕೊಂಡು ತಮ್ಮ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಾಗ ಸ್ವಯಂ ಉದ್ಯೋಗಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಸ್ವ-ಉದ್ಯೋಗ ಕೈಗೊಳ್ಳಲು ರಾಷ್ಟ್ರೀಕೃತ ಬ್ಯಾಂಕುಗಳು ಆರ್ಥಿಕ ಸಹಕಾರ ನೀಡುವುದರ ಜೊತೆಗೆ ಕೆಲವೊಂದು ಮಾರ್ಗದರ್ಶನ ನೀಡಲಿದೆ ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಪೂರ್ಣಪ್ರಜ್ಞ ಕಾಲೇಜಿನ ಜೈ ಕಿಶನ್ ಭಟ್ ಉಪನ್ಯಾಸ ನೀಡಿ, ಹೊಸ ವಿಚಾರಗಳ ಕುರಿತು ಅವಲೋಕಿಸಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು ಸಮಾಜಕ್ಕೆ ಮಾದರಿ ವ್ಯಕ್ತಿಯಾಗಬೇಕು ಎಂದು ಹೇಳಿದರು.
ಹತ್ತು ದಿನಗಳ ಉದ್ಯಮ ಶೀಲತಾ ಅಭಿವೃದ್ಧಿ ಕಾರ್ಯಕ್ರಮದ ಧ್ಯೇಯೋದ್ದೇಶಗಳನ್ನು ಹಾಗೂ ಯಶಸ್ವಿ ಉದ್ಯಮಶೀಲರ ಯಶೋಗಾಥೆಯನ್ನು ವಿವರಿಸಿದ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ಮಂಗಳೂರು ಇದರ ಅಧ್ಯಕ್ಷರಾದ ಮೋಹನಾಂಗಯ್ಯ ಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಪರಿಶಿಷ್ಟ ಜಾತಿ, ವರ್ಗಗಳ ಕೈಗಾರಿಕೋದ್ಯಮಗಳ ಸಂಘದ ಜಿಲ್ಲಾ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಸ್ವಾಗತಿಸಿ, ವಂದಿಸಿದರು.