ಮಣಿಪಾಲ, ಜು. 27: ಇಂದಿನ ಯುವ ಜನಾಂಗ ಶಾಸ್ತ್ರೀಯ ಸಂಗೀತದ ಸೂಕ್ಷ್ಮಗಳನ್ನು ತಾಳ್ಮೆಯಿಂದ ಅರಿಯುವ ಯತ್ನ ಮಾಡಬೇಕು ಎಂದು ಖ್ಯಾತ ಸಂಗೀತಗಾರ ಪಂಡಿತ್ ಮಿಲಿಂದ್ ಚಿತ್ತಾಲ್ ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆಂಡ್ ಸೈನ್ಸಸ್ (ಜೆಸಿಪಿಎಎಸ್), ಎಂಐಸಿ, ಎಂಐಟಿ ಯ ಆಶ್ರಯದಲ್ಲಿ ನಡೆದ ಹಿಂದೂಸ್ತಾನಿ ಗಾಯನದ ನಂತರ ನಡೆದ ಸಂವಾದದಲ್ಲಿ ಅವರು ಮಾತನಾಡಿದರು. ಈ ಆಧುನಿಕ ಸಮಾಜದಲ್ಲಿ ಸೇರಿಕೊಂಡಿರುವ ತೀವ್ರತರವಾದ ವೇಗ ಬದುಕಿನ ನೆಮ್ಮದಿಯನ್ನು ಕದಲುತ್ತದೆ. ಈ ಸಂದರ್ಭದಲ್ಲಿ ಮುಖ್ಯವಾಗಿ ಸಂಗೀತವನ್ನೊಳಗೊಂಡಂತೆ ಎಲ್ಲಾ ಕಲೆಗಳು ಜೀವನದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ ಎಂದು ಅವರು ಹೇಳಿದರು.
ಈ ಮೊದಲು ಖ್ಯಾತ ಲೇಖಕ ಯಶವಂತ್ ಚಿತ್ತಾಲ ಪುತ್ರರಾದ ಪಂಡಿತ್ ಮಿಲಿಂದ್ ಚಿತ್ತಾಲ್ ಇವರು ತಮ್ಮ ಸಂಗೀತದಲ್ಲಿ ರಾಗ್ ಶ್ರೀ, ರಾಗ್ ಜೈ ಜೈ ವಂತಿ, ಸೂರ್ ದಾಸ್ ಭಜನ್, ತೀರ್ಥ ವಿಠ್ಠಲ ಕ್ಷೇತ್ರ ವಿಠ್ಠಲ, ಮರಾಠಿ ಅಭಂಗ್ ಇತ್ಯಾದಿಗಳನ್ನು ಪ್ರಸ್ತುತಪಡಿಸಿದರು. ಅವರ ಜೊತೆ ವಯಲಿನ್ ನಲ್ಲಿ ರಂಗ ಪೈ, ತಬಲಾದಲ್ಲಿ ಭಾರವಿ ಧೇರಾಜೆ, ಹಾರ್ಮೋನಿಯಂ ನಲ್ಲಿ ಶಶಿಕಿರಣ್, ತಾನ್ ಪುರದಲ್ಲಿ ಪ್ರವೀಣ್ ಕರಾಡಗಿ ಸಾಥ್ ನೀಡಿದರು.
ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ಸಂಸ್ಥೆಯಲ್ಲಿ ನೀಡಲಾಗುತ್ತಿರುವ ಕೋರ್ಸ್‌ಗಳು ಸಂಗೀತ ಸೇರಿದಂತೆ ವಿವಿಧ ಪ್ರಕಾರದ ಕಲೆಗಳಿಗೆ ಹೇಗೆ ಸಂವೇದನಾಶೀಲವಾಗಿರಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತದೆ ಎಂದರು. ಮಾಹೆ ಸಾಂಸ್ಕೃತಿಕ ಸಮನ್ವಯ ಸಮಿತಿ ಅಧ್ಯಕ್ಷೆ ಡಾ. ಶೋಭಾ ಯು ಕಾಮತ್ ಸಂಗೀತ ಕಲಾವಿದರನ್ನು ಸನ್ಮಾನಿಸಿದರು.