ಕೋಟ: ಡಾ. ಡಿ. ಜಿ. ಶೆಟ್ಟಿ ಎಜುಕೇಷನಲ್ ಸೊಸೈಟಿ ಧಾರವಾಡ ಇದರ ಬಿ.ಡಿ. ಶೆಟ್ಟಿ ಕಾಲೇಜ್ ಆಫ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಮಾಬುಕಳ ಇಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನರೇಂದ್ರ ಕುಮಾರ್ ಕೋಟ ಆಗಮಿಸಿ, ವಿವೇಕಾನಂದರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಏಳು ಎದ್ದೇಳು ಗುರಿ ಮುಟ್ಟುವವರೆಗೆ ನಿಲ್ಲದಿರು ಎನ್ನುವ ಅವರ ಮಾತು ಎಲ್ಲರ ಮನಸ್ಸಿನ ಜಡತ್ವವನ್ನು ಬಡಿದೆಬ್ಬಿಸಬೇಕು.
ಪ್ರತಿಯೊಬ್ಬರೂ ಅವರವರ ಅಂತರಂಗದೊಂದಿಗೆ ಮಾತನಾಡಬೇಕು. ಆಗ ಅವರ ಸಾಮರ್ಥ್ಯ ಅವರಿಗೆ ತಿಳಿಯುತ್ತದೆ. ಪ್ರತಿಯೊಬ್ಬರಲ್ಲೂ ಪ್ರತಿಭೆ ಹಾಗೂ ಗುರಿ ಮುಟ್ಟುವ ಸಾಮರ್ಥ್ಯವಿರುತ್ತದೆ.
ಈ ನಿಟ್ಟಿನಲ್ಲಿ ತಾಳ್ಮೆ ಅತೀ ಮುಖ್ಯ. ಮಾತಿಗೆ ಒಂದು ಅರ್ಥವಿದ್ದರೆ ಮೌನಕ್ಕೆ ಹಲವಾರು ಅರ್ಥವಿರುತ್ತದೆ. ಆದ್ದರಿಂದ ತಾಳ್ಮೆ – ಆತ್ಮವಿಶ್ವಾಸವಿರಬೇಕು. ಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು.
ವಿವೇಕಾನಂದರಿಗೆ ಬಾಲ್ಯದಿಂದಲೂ ಹಲವಾರು ಪ್ರಶ್ನೆಗಳಿದ್ದವು. ಯೋಚಿಸು ಹೊಳೆಯುತ್ತದೆ, ಹುಡುಕು ಸಿಗುತ್ತದೆ ಅದಕ್ಕೆ ಅಂತ್ಯವೆಂಬುದಿಲ್ಲ ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಕರೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಬಿ.ಡಿ. ಶೆಟ್ಟಿ ಕಾಲೇಜಿನ ಸಂಚಾಲಕ ಎ. ರತ್ನಾಕರ ಶೆಟ್ಟಿ ವಹಿಸಿದ್ದರು. ಅತಿಥಿಗಳಾಗಿ ರೋಟರಿ ಕ್ಲಬ್ ಹಂಗಾರಕಟ್ಟೆ ಅಧ್ಯಕ್ಷೆ ಯಶೋಧ ಹೊಳ್ಳ, ಚೇತನಾ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಗಣೇಶ್ ಜಿ., ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಮೇಜರ್ ಜಿ. ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿಳಾದ ಸುಮಂತ್ ಕಾರ್ಯಕ್ರಮ ನಿರೂಪಿಸಿ, ಭಾರ್ಗವಿ ಪ್ರಾರ್ಥಿಸಿದರು. ಅಂಜಲಿ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿ, ಪ್ರೀತಿ ವಂದಿಸಿದರು.