ಬ್ರಹ್ಮಾವರ, ಜೂ. 18: ಇಂದಿನ ದಿನ ಯುವಜನರಿಗೆ ಸಂಸ್ಕಾರದ ಜೊತೆ ಶಿಕ್ಷಣ ದೊರೆತರೆ ಮಾತ್ರ ಉದ್ಯಮದಲ್ಲಿ ಯಶಸ್ಸು ಪಡೆಯಲು ಸಾಧ್ಯ. ಇದನ್ನು ಡಾ.ಡಿ.ವೀರೇಂದ್ರ ಹೆಗ್ಗಡೆಯವರು ತಮ್ಮ ಯೋಚನೆಯನ್ನು ರುಡ್ಸೆಟ್ ಮೂಲಕ ನೀಡುತ್ತಾ ಬಂದಿದ್ದಾರೆ. ಉದ್ಯಮ ವ್ಯವಹಾರದ ಜೊತೆಗೆ ಸಾಮಾಜಿಕ ಕಳಕಳಿ ಇರಲಿ. ಈ ಮೂಲಕ ಸಮಾಜದಲ್ಲಿ ಪ್ರಬುದ್ದ ನಾಗರಿಕರಾಗಿ ಎಂದು ಉಡುಪಿ ನಗರಸಭೆಯ ಕೊಡವೂರು ವಾರ್ಡ್ ನ ಸದಸ್ಯರಾದ ಕೆ. ವಿಜಯ ಕೊಡವೂರು ಅಭಿಪ್ರಾಯಪಟ್ಟರು.
ಬ್ರಹ್ಮಾವರ ರುಡ್ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದ ಕಂಪ್ಯೂಟರ್ ಅಕೌಂಟಿಂಗ್ ತರಬೇತಿಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು. ಭ್ರಷ್ಟಾಚಾರ ರಹಿತ, ಪ್ರಾಮಾಣಿಕತೆಯ ವ್ಯವಹಾರ ನಡೆಸಲು ಪ್ರಯತ್ನಿಸಿ ದೇಶದ ಸಂಸ್ಕಾರ- ಸಂಸ್ಕೃತಿ ಉಳಿಸುವಲ್ಲಿ ಕಾರ್ಯಪ್ರವೃತ್ತರಾಗಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಲಕ್ಷ್ಮೀಶ ಎ.ಜಿ ಮಾತನಾಡಿ, ದುಷ್ಚಟದಿಂದ ದೂರ ಇದು ವ್ಯವಹಾರ ನಡೆಸಿ. ಪ್ರತಿ ಹೆಜ್ಜೆಯಲ್ಲೂ ವ್ಯವಹಾರದ ಲೆಕ್ಕಚಾರವಿರಲಿ. ಜಟಿಲವಾದ ಸಮಸ್ಯೆಗಳು ಬಂದರೆ ಖಂಡಿತವಾಗಿ ಸಂಸ್ಥೆಯನ್ನು ಸಂಪರ್ಕಿಸಿ ಎಂದು ಶುಭ ಹಾರೈಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಕೆ. ಕರುಣಾಕರ ಜೈನ್ ಸ್ವಾಗತಿಸಿ ತರಬೇತಿಯ ಹಿನ್ನೋಟವನ್ನು ನೀಡಿ ನಿರೂಪಿಸಿದರು. ಶ್ವೇತ ಪ್ರಾರ್ಥನೆ ನೆರವೇರಿಸಿದರು. ಹಿರಿಯ ಕಛೇರಿ ಸಹಾಯಕರಾದ ಶ್ರೀನಿವಾಸಯ್ಯ ವಂದಿಸಿದರು. ಉಪನ್ಯಾಸಕರಾದ ಸಂತೋಷ್ ಶೆಟ್ಟಿ, ರವಿ ಸಾಲ್ಯಾನ್ ಉಪಸ್ಥಿತರಿದ್ದರು. ಶಿಬಿರಾರ್ಥಿಗಳಾದ ವಿನಯ ಭಟ್, ಸಂತೋಷ ಕೆರಾಡಿ, ಶ್ಯಾಮಲ ಕುಡ್ವ, ವಿಕಾಸ್, ಕಿರಣ ತಮ್ಮ ಅನುಭವ ಹಂಚಿಕೊಂಡರು.