ಉಡುಪಿ, ಜುಲೈ 15: ಉಡುಪಿ ನಗರಸಭೆಯ ವತಿಯಿಂದ ಜಿಲ್ಲೆಯ ವಿವಿಧೆಡೆ ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ, ಒಟ್ಟು 107.81 ಕೆ. ಜಿ. ನಿಷೇಧಿತ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಂಡು 47,500 ರೂ. ದಂಡ ವಸೂಲಿ ಮಾಡಲಾಯಿತು. ಜೂನ್ 26 ರಂದು ಮಲ್ಪೆಯಲ್ಲಿ 41.87 ಕೆ.ಜಿ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಂಡು 24,000 ರೂ., ಜೂನ್ 28 ರಂದು ಪರ್ಕಳದಲ್ಲಿ 29.44 ಕೆ.ಜಿ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಂಡು 10,500 ರೂ. ಹಾಗೂ ಶನಿವಾರ ಶ್ರೀ ಕೃಷ್ಣ ಮಠದ ಬಳಿ ನಿಷೇದಿತ ಪ್ಲಾಸ್ಟಿಕ್‌ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ದಾಳಿ ನಡೆಸಿ 36.5 ಕೆ.ಜಿ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಂಡು ರೂ. 12,500 ದಂಡ ವಿಧಿಸಲಾಯಿತು.
ದಾಳಿಯಲ್ಲಿ ನಗರಸಭೆಯ ಪರಿಸರ ಅಭಿಯಂತರರು, ಹಿರಿಯ ಆರೋಗ್ಯ ನಿರೀಕ್ಷಕರು, ಕಿರಿಯ ಆರೋಗ್ಯ ನಿರೀಕ್ಷಕರು, ಸ್ಯಾನೀಟರಿ ಸೂಪರ್‌ವೈಸರ್ ಹಾಗೂ ಪೌರಕಾರ್ಮಿಕರು ಭಾಗವಹಿಸಿದ್ದರು. ಸಾರ್ವಜನಿಕರು, ಉದ್ದಿಮೆದಾರರು, ವ್ಯಾಪಾರಿಯವರು ನಿಷೇಧಿತ ಪ್ಲಾಸ್ಟಿಕ್‌ಗಳನ್ನು ಉಪಯೋಗಿಸುವುದು ಕಂಡುಬಂದಲ್ಲಿ ಉದ್ದಿಮೆ ಪರವಾನಿಗೆಯನ್ನು ರದ್ದುಪಡಿಸಿ, ದಂಡ ವಿಧಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.