ಕಾರ್ಕಳ, ಜು. 15: ಪಡಿ ಮಂಗಳೂರು, ಪುರಸಭೆ ಕಾರ್ಕಳ, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ (ರಿ.) ಉಡುಪಿ,
ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರ ಕಾರ್ಕಳ, ಜೆಸಿಐ ರೂರಲ್ ಕಾರ್ಕಳ, ಸಹಭಾಗಿತ್ವದಲ್ಲಿ ಶಿಕ್ಷಣ ಹಕ್ಕು ಮತ್ತು ಮಕ್ಕಳ ರಕ್ಷಣೆಗಾಗಿ ‘ಮಕ್ಕಳ ಧ್ವನಿಗೆ ಧ್ವನಿಯಾಗೋಣ ಅಭಿಯಾನ- 2023’ ಪುರಸಭಾ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಬೆಟ್ಟು ಅಮ್ಮನ ನೆರವು ಸಹಭಾಗಿತ್ವದಲ್ಲಿ ಪುಸ್ತಕ ವಿತರಣಾ ಕಾರ್ಯಕ್ರಮವು ನಡೆಯಿತು. ಪಡಿ ಸಂಸ್ಥೆಯ ಸಂಪನ್ಮೂಲ ತರಬೇತುದಾರರಾದ ಶೋಭಾ ಭಾಸ್ಕರ್ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮೆಲ್ಲರ ಕರ್ತವ್ಯ. ಶಾಲಾ ಹಂತದಲ್ಲಿ ಮಗುವಿನ ಶಿಕ್ಷಣ ಹಾಗೂ ಕಲಿಕೆಯು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯ ಚಟುವಟಿಕೆಗಳಾಗಿ ನಡೆಯುವುದರಿಂದ ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ಹೆಚ್ಚಿಸಲು ಅನುಕೂಲಕರ ವಾತವರಣದ ಅಗತ್ಯತೆ ಇದೆ. ಶಿಕ್ಷಣದ ಜೊತೆ ಮಕ್ಕಳ ರಕ್ಷಣೆ, ಆರೋಗ್ಯ, ಪೋಷಣೆಗೆ ಸಂಬಂಧಪಟ್ಟಂತೆ ಹೆಚ್ಚಿನ ಗಮನಹರಿಸಬೇಕು ಮತ್ತು ಇದು ಸ್ಥಳೀಯ ಸರಕಾರದ ಜವಾಬ್ದಾರಿ ಎಂದರು.
ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಅಬ್ದುಲ್ ಹಾರಿಸ್ ವಹಿಸಿದ್ದರು. ಜನಪ್ರತಿನಿಧಿಗಳಾದ ರೆಹಮತ್ ಶೇಕ್, ಪ್ರಭ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಬೆಟ್ಟು ಶಾಲೆಯ ಹಳೆ ವಿದ್ಯಾರ್ಥಿ ಹರೀಶ್ ಶಣೈ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಜೆಸಿಐ ರೂರಲ್ ಕಾರ್ಕಳ ಇದರ ಅಧ್ಯಕ್ಷರಾದ ಮಂಜುನಾಥ್ ಕೋಟ್ಯಾನ್, ಸರಕಾರಿ ಪ್ರೌಢಶಾಲೆ ಕಾಬೆಟ್ಟು ಇಲ್ಲಿಯ ಹಿರಿಯ ಶಿಕ್ಷಕಿ ಸುಮಾ ಶುಭ ಹಾರೈಸಿದರು. ಅಮ್ಮನ ನೆರವು ಸಂಚಾಲಕರಾದ ಅವಿನಾಶ್ ಶೆಟ್ಟಿ ಎಲ್ಲಾ ಮಕ್ಕಳಿಗೆ ಪುಸ್ತಕ ವಿತರಿಸಿ ಶುಭ ಹಾರೈಸಿದರು. ತಾಲೂಕು ದೈಹಿಕ ಕ್ರೀಡಾಧಿಕಾರಿ ರವಿಕಾಂತ್ ರವರು ಪಡಿ ಸಂಸ್ಥೆಯ ಸಹಕಾರದೊಂದಿಗೆ ನಡೆಯುವ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪಡಿ ಸಂಸ್ಥೆಯ ತರಬೇತುದಾರ ವಿವೇಕ್ ರವರು ಮಕ್ಕಳ ಹಕ್ಕುಗಳು, ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಪೋಕ್ಸೋ, ಬಾಲಕಾರ್ಮಿಕತೆ, ಮಕ್ಕಳ ಅತಿಯಾದ ಮೊಬೈಲ್ ಬಳಕೆ ಇನ್ನಿತರ ವಿಚಾರಗಳ ಕುರಿತು ಕಿರುಚಿತ್ರ ಪ್ರದರ್ಶಿಸಲಾಯಿತು. ಕಾರ್ಕಳ ಪೊಲೀಸ್ ಠಾಣೆಯ ಸಂತೋಷ್ ಪೋಕ್ಸೋ ಕಾಯಿದೆ, ಬಾಲ್ಯವಿವಾಹ ನಿಷೇಧ ಕಾಯಿದೆ ಕುರಿತು ಮಾಹಿತಿ ನೀಡುವುದರ ಜೊತೆಗೆ ಸಂವಾದ ನಡೆಸಿದರು. ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ ಉಡುಪಿ ಇದರ ಅಧ್ಯಕ್ಷರಾದ ದಿವಾಕರ್ ಕುಮಾರ್, ಪಡಿ ಸಂಸ್ಥೆಯ ಸಂಯೋಜಕರಾದ ವಿಜಯ, ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಸದಸ್ಯರಾದ ರೇಷ್ಮಾ, ಶಾಲೆಯ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಜೆಸಿಂತ ಸ್ವಾಗತಿಸಿದರು. ದೈಹಿಕ ಶಿಕ್ಷಕ ನರೇಂದ್ರ ಕಾಮತ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.