ಉಡುಪಿ: ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯಕ್ಕೆ ಶ್ರೀ ಕೃಷ್ಣಮಠದ ಪರ್ಯಾಯ ಪೀಠಾರೋಹಣ ಮಾಡಲಿರುವ ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಆಗಮಿಸಿ ಕಾಲೇಜಿನ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರಿಂದ ಗೌರವ ಆತಿಥ್ಯ ಪಡೆದು ಆಶೀರ್ವಚನ ನೀಡಿದರು.
ಮಠ ಮಂದಿರಗಳಲ್ಲಿ ಸ್ವಾಮೀಜಿಯವರು ಸಿದ್ಧಿಗಾಗಿ ತಪಸ್ಸು ಮಾಡುತ್ತಾರೆ. ಅದೇ ರೀತಿ ಕಾನೂನು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ನ್ಯಾಯ ವಿದ್ಯೆಗಾಗಿ ತಪಸ್ಸು ಮಾಡುತ್ತಾರೆ.
ನ್ಯಾಯಾಲಯಗಳಲ್ಲಿ, ಕಾನೂನು ಕಲಿತವರು ತಮ್ಮ ಕಕ್ಷಿದಾರರ ಪರವಾಗಿ ನ್ಯಾಯಾಧೀಶರಿಂದ ಫಲಾಪೇಕ್ಷಿಸಿದಂತೆ ಮಠ ಮಂದಿರದಲ್ಲಿ ಸ್ವಾಮೀಜಿ, ಯತಿವರ್ಯರು ಭಕ್ತರ ಅಹವಾಲುಗಳನ್ನು ಸ್ವೀಕರಿಸಿ ಫಲಾಪೇಕ್ಷೆಗಾಗಿ ದೇವರನ್ನು ಪ್ರಾರ್ಥಿಸುತ್ತಾರೆ. ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಸಾಧನೆ ಮಾಡುವಂತೆ ಉಡುಪಿ ಶ್ರೀ ಕೃಷ್ಣ ದೇವರು ಅನುಗ್ರಹಿಸಲಿ ಎಂದು ಆಶೀರ್ವದಿಸಿದರು.
ನ್ಯಾಯೇನ ಮಾರ್ಗೇಣ ಮಹೀಂ ಮಹಿಶಾ: ಲೋಕಾ: ಸಮಸ್ತಾ: ಸುಖಿನೋ ಭವಂತು ಭೂಮಿಯನ್ನಾಳುವವರು ನ್ಯಾಯ ಮಾರ್ಗದಿಂದ ನಡೆದರೆ ಲೋಕದ ಎಲ್ಲರೂ ಕೂಡ ಸುಖಿಗಳಾಗಿರುತ್ತಾರೆ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ನಿರ್ಮಲ ಕುಮಾರಿಯವರು ಶ್ರೀಪಾದರನ್ನು ಸ್ವಾಗತಿಸಿ ಗೌರವಿಸಿದರು.
ದೈಹಿಕ ಶಿಕ್ಷಕರಾದ ಪ್ರಕಾಶ್ ರಾವ್ ಡಿ., ಉಪನ್ಯಾಸಕಿ ಜಯಮೋಲ್, ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸಂಪತ್ ಕುಮಾರ್, ಮುರಳೀಧರ ಪೈ, ವಿದ್ಯಾರ್ಥಿಗಳು ಮತ್ತು ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು. ಚಿಂತನ್ ಹೆಗ್ಡೆ ವಂದಿಸಿ, ಅಶ್ವಿನಿ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.