ಕಾರ್ಕಳ, ಜು. 5: ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಆಯುರ್ವೇದಭೂಷಣ ಎಂ. ವಿ. ಶಾಸ್ತ್ರಿ ಪ್ರೌಢಶಾಲೆಯಲ್ಲಿ ಸ್ಥಾಪಕರ ದಿನ ಮತ್ತು ನಿವೃತ್ತ ಮುಖ್ಯ ಶಿಕ್ಷಕರಾದ ಸುಧಾಕರ್ ಆಚಾರ್ಯ ಅವರನ್ನು ಸನ್ಮಾನಿಸಿ ಬೀಳ್ಕೊಡುವ ಕಾರ್ಯಕ್ರಮ ನಡೆಯಿತು. ಚಿಂತಕರು ಮತ್ತು ನಿವೃತ್ತ ಮುಖ್ಯ ಶಿಕ್ಷಕರಾದ ಮುನಿರಾಜ ರೆಂಜಾಳ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಶಾಲೆಯ ಸ್ಥಾಪಕರಾದ ಆಯುರ್ವೇದಭೂಷಣ ಎಂ ವಿ ಶಾಸ್ತ್ರಿಗಳ ಹುಟ್ಟುಹಬ್ಬವನ್ನು ಸ್ಥಾಪಕರ ದಿನವಾಗಿ ಆಚರಣೆ ಮಾಡುವುದರ ಮೂಲಕ ಶಾಲೆಯು ಉನ್ನತ ಪರಂಪರೆಯನ್ನು ಹಾಕಿಕೊಟ್ಟಿದೆ. ಕೀರ್ತಿಶೇಷರ ಸ್ಮರಣೆ ಮಾಡುವುದರ ಮೂಲಕ ಮೌಲ್ಯಗಳ ಉದ್ದೀಪನ ಆಗುತ್ತದೆ ಎಂದರು.
ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಸುಧಾಕರ ಆಚಾರ್ಯ ಅವರನ್ನು ಆಯುರ್ವೇದಭೂಷಣ ಎಂ ವಿ ಶಾಸ್ತ್ರಿ ಟ್ರಸ್ಟ್ ವತಿಯಿಂದ, ಶಾಲೆಯ ವತಿಯಿಂದ ಮತ್ತು ಇತರ ಸಂಘ ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು. ಕಾರ್ಕಳ ತಾಲೂಕು ಕಸಾಪ ಅಧ್ಯಕ್ಷರಾದ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಅವರು ಅಭಿನಂದನ ಭಾಷಣ ಮಾಡಿದರು. ರೇಷ್ಮಾ ಉದಯಕುಮಾರ್ ಶೆಟ್ಟಿ ಅವರು ಗುರುವಂದನೆಯ ನುಡಿಗಳನ್ನು ಆಡಿದರು. ಸುಧಾಕರ್ ಆಚಾರ್ಯ ಸನ್ಮಾನಕ್ಕೆ ಉತ್ತರಿಸಿ ಕೃತಜ್ಞತೆ ಸಲ್ಲಿಸಿದರು.
ಶಾಲೆಯ ಸಂಚಾಲಕರಾದ ಸತೀಶ್ ಸದಾನಂದ ಅವರು ಸ್ಥಾಪಕರ ಪರಿಚಯ ಮಾಡಿದರು ಮತ್ತು ವಿವಿಧ ದತ್ತಿನಿಧಿಗಳನ್ನು ಹಸ್ತಾಂತರ ಮಾಡಿದರು. ಡಾ. ಎನ್ ಜೆ ಉಷಾರಾವ್ ಅವರ ಸ್ಮರಣೆಯ ನಗದು ಪುರಸ್ಕಾರಗಳನ್ನು ವೇದಿಕೆಯಲ್ಲಿ ಹಸ್ತಾಂತರಿಸಲಾಯಿತು. ದಾನಿಗಳಾದ ಜಯ ಎಸ್ ಕೋಟ್ಯಾನ್, ಶ್ರೀಧರ್ ಸನಿಲ್ ಪೊಸ್ರಾಲ್, ಶಾಲೆಯ ಸ್ಥಾಪಕ ಮುಖ್ಯಶಿಕ್ಷಕ ಪ್ರಕಾಶ್ ರಾವ್ ಪಿ.ಎನ್ ಅವರು ಶುಭಾಶಂಸನೆ ಮಾಡಿದರು. ಶಾಲಿನಿ ಸುಧಾಕರ್ ಆಚಾರ್ಯ ಉಪಸ್ಥಿತರಿದ್ದರು. ಶಾಲೆಯ ಮುಖ್ಯಶಿಕ್ಷಕ ರಾಜೇಂದ್ರ ಭಟ್ ಕೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಶಿಕ್ಷಕ ದಿನೇಶ್ ನಾಯಕ್ ವಂದಿಸಿದರು.