ಉಡುಪಿ, ಜುಲೈ 3: ಹಡಪದ ಅಪ್ಪಣ್ಣ ಅವರು ವಚನಗಳನ್ನು ರಚಿಸುವುದರೊಂದಿಗೆ ಸಮಾಜ ಸುಧಾರಣೆಗೆ ಮುಂದಾದರೆ, ಡಾ.ಫ.ಗು.ಹಳಕಟ್ಟಿ ಅವರು ವಚನಕಾರರು ರಚಿಸಿದ ವಚನಗಳನ್ನು ಸಂಗ್ರಹಿಸಿ ಮುದ್ರಿಸುವುರೊಂದಿಗೆ ಜನಸಾಮಾನ್ಯರಿಗೆ ತಲುಪುವಂತೆ ಮಾಡಿದರು ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಹೇಳಿದರು. ಅವರು ಸೋಮವಾರ ನಗರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಡಾ.ಫ.ಗು.ಹಳಕಟ್ಟಿ ಹಾಗೂ ಹಡಪದ ಅಪ್ಪಣ್ಣ ರವರ ಜನ್ಮದಿನ, ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
12 ನೇ ಶತಮಾನದ ಅರಸೊತ್ತಿಗೆ ಕಾಲದಲ್ಲಿ ಸಮಾಜದ ಸುಧಾರಣೆಗೆ ಬಸವಣ್ಣ, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಅಲ್ಲಮಪ್ರಭು, ಸಿದ್ದರಾಮ ಸೇರಿದಂತೆ ಮೊದಲಾದವರು ಸರಳ ಭಾಷೆಯ ವಚನಗಳ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಲು ಮುಂದಾದರು. ಅವರ ವಚನಗಳಿಂದ ಜನಸಾಮಾನ್ಯರು ಬದಲಾವಣೆಗೊಳ್ಳಲು ಸಾಧ್ಯವಾಯಿತು. ವಚನಗಳು ವಿಶ್ವ ಸಾಹಿತ್ಯಕ್ಕೆ ನೀಡಿದ ಅಮೂಲ್ಯ ಕೊಡುಗೆ ಎಂದರು.
ಇಂದಿನ ಯುವಜನತೆ ವಚನಗಳನ್ನು ಓದಿ, ಅವುಗಳಲ್ಲಿನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಶಿಸ್ತು ಸಮನ್ವಯದೊಂದಿಗೆ ಉತ್ತಮ ಶಿಕ್ಷಣವಂತರಾಗಿ ಭವಿಷ್ಯ ರೂಪಿಸಿಕೊಳ್ಳುವುದರೊಂದಿಗೆ ಸದೃಢ ಭಾರತ ನಿರ್ಮಾಣ ಮಾಡಲು ಮುಂದಾಗಬೇಕು ಎಂದರು. ಗುರುವೆಂದರೆ ಕೇವಲ ಶಿಕ್ಷಕರಲ್ಲ ಜೀವನದಲ್ಲಿ ಸರಿಯಾದ ದಾರಿ ತೋರುವ ಪ್ರತಿಯೊಬ್ಬರೂ ನಮಗೆ ಗುರುಗಳೇ ಆಗಿರುತ್ತಾರೆ. ಅವರು ಹಾಕಿಕೊಟ್ಟ ಮಾರ್ಗದರ್ಶನವು ನಮಗೆ ಎಂದೂ ದಾರಿದೀಪವಾಗಿರುತ್ತದೆ ಎಂದರು.
ಡಾ.ಫ.ಗು.ಹಳಕಟ್ಟಿ ಹಾಗೂ ಹಡಪದ ಅಪ್ಪಣ್ಣ ಅವರ ಕುರಿತು ಉಪನ್ಯಾಸ ನೀಡಿದ, ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ನಿಕೇತನ, ಡಾ.ಫ.ಗು.ಹಳಕಟ್ಟಿ ಅವರು ವಚನ ಸಾಹಿತ್ಯ ಸಂಗ್ರಹ ಮತ್ತು ವಚನಗಳ ಕೊಡುಗೆಯ ಮೂಲಕ ವ್ಯಕ್ತಿತ್ವ ವಿಕಸನ ಹಾಗೂ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಿದ್ದಾರೆ. ಅವರು ಹಳ್ಳಿ ಹಳ್ಳಿಗಳನ್ನು ಸುತ್ತಿ ಓಲೆಗರಿಗಳಲ್ಲಿ ಬರೆದ ವಚನ ಸಾಹಿತ್ಯವನ್ನು ಸಂಗ್ರಹಿಸಿ ತಮ್ಮ ಸ್ವಂತ ಹಣದಿಂದ ಮುದ್ರಣ ಮಾಡುವುದರೊಂದಿಗೆ ಸಾರ್ವಜನಿಕರಿಗೆ ದೊರಕುವಂತೆ ಮಾಡಿದರು ಎಂದರು.
ಬಡತನದಿಂದ ಬಂದ ಹಡಪದ ಅಪ್ಪಣ್ಣ, ಬಸವಣ್ಣವರ ಆಪ್ತರಾಗಿ ಸಮಾಜಕ್ಕೆ ತಮ್ಮದೇ ಆದ ಅಮೂಲ್ಯವಾದ ಕೊಡುಗೆಯನ್ನು ವಚನ ಸಾಹಿತ್ಯದ ಮೂಲಕ ನೀಡಿದರು ಎಂದರು. ಕಲಾವಿದರಾದ ಸ್ವಪ್ನರಾಜ್ ಹಾಗೂ ರಾಜು ಸಂತೆಕಟ್ಟೆ ವಚನ ಗಾಯನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ ಹಾಗೂ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ. ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಲೀಲಾಬಾಯಿ ಭಟ್ ವಂದಿಸಿದರು. ಎಂ. ಜಿ ಎಂ ಸಂಧ್ಯಾ ಕಾಲೇಜಿನ ಕನ್ನಡ ಉಪನ್ಯಾಸಕ ರಾಮಾಂಜಿ ನಿರೂಪಿಸಿದರು.