ಉಡುಪಿ, ಜೂನ್ 29: ಉಡುಪಿ ಜಿಲ್ಲೆಯಾದ್ಯಂತ ವಿವಿಧ ಇಲಾಖೆಗಳಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳ ತೀವ್ರ ಕೊರತೆಯಿಂದ ಸಾವಿರಾರು ಅರ್ಜಿಗಳು ವಿಲೇವಾರಿಯಾಗದೆ ಜನಸಾಮಾನ್ಯರಿಗೆ ತಮ್ಮ ಸಮಸ್ಯೆಗಳ ಪರಿಹಾರ ಹಾಗೂ ಸರಕಾರದ ಯೋಜನೆಗಳನ್ನು ಪಡೆಯಲು ಸಾಧ್ಯಗದೇ ತೀವ್ರ ತೊಂದರೆ ಉಂಟಾಗುತ್ತಿದ್ದು, ವಿವಿಧ ಭಾಗ್ಯಗಳ ಅನುಷ್ಠಾನದ ಜೊತೆ ಜೊತೆಗೆ ರಾಜ್ಯ ಸರಕಾರ ಕೂಡಲೇ ಖಾಲಿ ಹುದ್ದೆಗಳಿಗೆ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸುವಂತೆ ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ಆಗ್ರಹಿಸಿದ್ದಾರೆ.
ನಗರಾಭಿವೃದ್ಧಿ ಪ್ರಾಧಿಕಾರ, ನಗರಸಭೆ, ಮೀನುಗಾರಿಕೆ, ಆರೋಗ್ಯ, ಕಂದಾಯ, ಗ್ರಾಮ ಪಂಚಾಯತ್ ಮೊದಲಾದ ಜನಸಾಮಾನ್ಯರ ದೈನಂದಿನ ಚಟುವಟಿಕೆಗೆ ಪೂರಕವಾಗಿರುವ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿಂದ ಜನಸಾಮಾನ್ಯರ ತುರ್ತು ಕೆಲಸಗಳು ವಿಳಂಬವಾಗುತ್ತಿವೆ. ರಾಜ್ಯ ಸರ್ಕಾರ ಆಡಳಿತಕ್ಕೆ ಬಂದ ದಿನದಿಂದ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ ಭಾಗ್ಯಗಳ ಅನುಷ್ಠಾನ ಮಾಡುವ ಬಗ್ಗೆ ಮಾತ್ರ ಚರ್ಚೆ ನಡೆಸುತ್ತಿದ್ದು, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕಾರ್ಯವನ್ನು ಕಡೆಗಣಿಸಿದೆ. ಪಠ್ಯಪುಸ್ತಕ ಪರಿಷ್ಕರಣೆ, ಮತಾಂತರ ನಿಷೇಧ ಕಾನೂನು ರದ್ದು, ಗೋಹತ್ಯೆ ನಿಷೇಧ ಕಾನೂನು ಹಿಂಪಡೆಯುವ ವಿವಾದಾತ್ಮಕ ವಿಚಾರದಲ್ಲಿ ತೀವ್ರ ಆಸಕ್ತಿ ತೋರುವ ರಾಜ್ಯ ಸರ್ಕಾರ, ಈ ಗಂಭೀರ ಸಮಸ್ಯೆಯ ಬಗ್ಗೆ ತೀವ್ರ ನಿರ್ಲಕ್ಷ್ಯ ಮಾಡುತ್ತಿದೆ. ರಾಜ್ಯ ಸರ್ಕಾರ ಸಮಸ್ಯೆಯ ಗಂಭೀರತೆಯನ್ನು ಅರಿತು ಕೂಡಲೇ ಆದ್ಯತೆಯ ಮೇರೆಗೆ ಸಿಬ್ಬಂದಿಗಳ ಭರ್ತಿಗೆ ಆದೇಶ ಹೊರಡಿಸುವಂತೆ ಆಗ್ರಹಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.