ಉಡುಪಿ: ವಿಶ್ರಾಂತ ಶಿಕ್ಷಕ, ಸಂಗೀತ ಗುರು, ಉಡುಪಿ ನಾದವೈಭವಂ ವಾಸುದೇವ ಭಟ್ ಬೆಂಗಳೂರಿನ ತಮ್ಮ ಪುತ್ರಿಯ ಮನೆಯಲ್ಲಿ ಗುರುವಾರ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದಾಗಿ ಕಳೆದ ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿ ಬುಧವಾರವಷ್ಟೇ ಬಿಡುಗಡೆಗೊಂಡಿದ್ದರು.
ಉಡುಪಿಯಲ್ಲಿ ನಾದ ವೈಭವಂ ಎಂಬ ಕಲಾ ಸಂಘಟನೆಯನ್ನು ಹುಟ್ಟುಹಾಕಿ, ಸಂಗೀತ ನತ್ಯ ರೂಪಕ ಹಾಗೂ ಚಲನಚಿತ್ರಗಳನ್ನು ರಚಿಸಿ, ನಿರ್ದೇಶಿಸಿ, ಪಾತ್ರವನ್ನೂ ನಿರ್ವಹಿಸಿ ಸೈ ಎನಿಸಿಕೊಂಡಿದ್ದರು.
ಕರ್ಣಾಟಕ ಮತ್ತು ಹಿಂದೂಸ್ತಾನಿ ಸಂಗೀತ ಕ್ಷೇತ್ರಗಳೆರಡರಲ್ಲೂ ನಿಪುಣರಾಗಿದ್ದ ಅವರು, ಯಾವುದೇ ವಾದನಗಳನ್ನು ನುಡಿಸುವ ಸಾಮರ್ಥ್ಯ ಹೊಂದಿದ್ದರು. ಕನ್ನಡವೂ ಸೇರಿದಂತೆ 5 ಭಾಷೆಗಳಲ್ಲಿ ತರ್ಜುಮೆಗೊಂಡ ಏಸುಕ್ರಿಸ್ತನ ಕುರಿತ ಕನ್ನಡ ಚಲನಚಿತ್ರ ‘ಭುವನಜ್ಯೋತಿ’ ವಾಸುದೇವ ಭಟ್ ನಿರ್ಮಿಸಿದ್ದರು.
ಕಿನ್ನಿಗೋಳಿ ಮತ್ತು ಮೂಲ್ಕಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದ ಅವರು, ನಿವೃತ್ತಿ ಬಳಿಕ ಉಡುಪಿಯಲ್ಲಿ ನೆಲೆಸಿದ್ದರು. ಈ ಹಿಂದಿನ ಜಿಲ್ಲಾಧಿಕಾರಿ ಹೇಮಲತಾ ಪೊನ್ನುರಾಜ್, ಆರ್.ಟಿ.ಓ. ಆಗಿದ್ದ ಓಂಕಾರೇಶ್ವರಿ ಮೊದಲಾದವರೂ ಸೇರಿದಂತೆ ಅನೇಕ ಮಂದಿ ಗಾಯಕರಿಗೆ ಸಂಗೀತ, ವೀಣಾವಾದನ, ಹಾರ್ಮೋನಿಯಂ ಗುರುಗಳಾಗಿ ಅನೇಕ ಸಂಗೀತ ಕ್ಷೇತ್ರದ ಶಿಷ್ಯ ವೃಂದ ಹೊಂದಿದ್ದರು. ಬಿಡಾರಂ ಕೃಷ್ಣಪ್ಪನವರ ಜಯಂತಿ ಉತ್ಸವವನ್ನು ಉಡುಪಿಯಲ್ಲಿ ಆಚರಿಸುತ್ತಿದ್ದರು.
ಖ್ಯಾತ ಗಾಯಕರಾದ ಎಸ್. ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಕೆ. ಜೆ. ಏಸುದಾಸ್ ಅವರಿಗೆ ನೋಟಿಫಿಕೇಶನ್, ಸಂಗೀತ ಸ್ವರ, ರಾಗ ಹಾಕಿಕೊಡುತ್ತಿದ್ದರು. ಪತ್ರಕರ್ತರಾಗಿಯೂ ಕಾರ್ಯನಿರ್ವಹಿಸಿದ್ದ ಅವರು, ಸಂಯುಕ್ತ ಕರ್ನಾಟಕ ಪತ್ರಿಕೆಗೆ 90ರ ದಶಕದಲ್ಲಿ ಉಡುಪಿಯಲ್ಲಿ ವರದಿಗಾರಿಕೆ ಮಾಡುತ್ತಿದ್ದರು.
ಮೃತರು ಪತ್ನಿ, ಗಾಯಕಿ ವಸುಧಾ ಗಿರಿಧರ್, ಶುಭಾ ಸುಬ್ರಹ್ಮಣ್ಯ ಬಾಸ್ರಿ ಸಹಿತ ನಾಲ್ವರು ಪುತ್ರಿಯರು ಹಾಗೂ ಅಪಾರ ಶಿಷ್ಯವೃಂದವನ್ನು ಅಗಲಿದ್ದಾರೆ. ವಾಸುದೇವ ಭಟ್ ನಿಧನಕ್ಕೆ ಗಣೇಶರಾಜ್ ಸರಳೇಬೆಟ್ಟು ಮೊದಲಾದವರು ಸಂತಾಪ ಸೂಚಿಸಿದ್ದಾರೆ.
ಪತ್ರಕರ್ತರ ಸಂಘ ಕಂಬನಿ: ಉಡುಪಿಯಲ್ಲಿ 90ರ ದಶಕದಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದ ಹಿರಿಯ ಸಂಗೀತ ನಿರ್ದೇಶಕ ನಾದ ವೈಭವಂ ವಾಸುದೇವ ಭಟ್ ನಿಧನಕ್ಕೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕಂಬನಿ ಮಿಡಿದಿದೆ.
ಸಂಗದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಹಾಗೂ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.