ಉಡುಪಿ, ಜೂ. 21: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಶು ವೈದ್ಯಾಧಿಕಾರಿಗಳೊಂದಗೆ ಸಭೆ ನಡೆಸಿದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ರವರು ಹೈನುಗಾರಿಕೆಯನ್ನು ನಂಬಿಕೊಂಡಿರುವ ಗ್ರಾಮೀಣ ಭಾಗದ ರೈತರಿಗೆ ಉತ್ತಮ ಸೇವೆ ನೀಡುವ ಮೂಲಕ ಹೈನುಗಾರಿಕೆ ಬೆಳವಣಿಗೆಗೆ ಸಹಕರಿಸುವಂತೆ ವೈದ್ಯಾಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಪಶುಸಂಗೋಪನೆ ಇಲಾಖೆಯ ವಿವಿಧ ವೈಯಕ್ತಿಕ ಫಲಾನುಭವಿ ಯೋಜನೆಗಳು, ಲಸಿಕೆ, ಜಾನುವಾರುಗಳ ರೋಗಗಳು, ಔಷಧಗಳ ಪೂರೈಕೆ, ಜಾನುವಾರು ಅಂಬ್ಯುಲೆನ್ಸ್ ಸೇವೆ ಪ್ರಾರಂಭ, ಬೀದಿ ನಾಯಿಗಳ ಕಾಟ ಸಹಿತ ವಿವಿಧ ಸಮಸ್ಯೆ ಮತ್ತು ಬೇಡಿಕೆಗಳ ಬಗ್ಗೆ ಹಾಗೂ ವಿಶೇಷವಾಗಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು.
ಕೊಕ್ಕರ್ಣೆ ಮತ್ತು ಪೇತ್ರಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ವ್ಯಾಪ್ತಿಯು ಭೌಗೋಳಿಕವಾಗಿ ವಿಸ್ತಾರವಾಗಿದ್ದು, ಸುಮಾರು 12,000 ಕ್ಕೂ ಹೆಚ್ಚು ಜಾನುವಾರುಗಳನ್ನು ಹೊಂದಿದ್ದು, ಪಶು ಚಿಕಿತ್ಸಾಲಯವಾಗಿ ಮೇಲ್ದರ್ಜೆಗೆ ಏರಿಸುವ ಮೂಲಕ ಸ್ಥಳೀಯ ರೈತರಿಗೆ ಮತ್ತು ಸಮೀಪದ ನೀಲಾವರ ಗೋಶಾಲೆಗೆ ಅಗತ್ಯ ಸೇವೆ ನೀಡಲು ಸಾಧ್ಯವಾಗಲಿದ್ದು ಮತ್ತು ಈ ಬಗ್ಗೆ ತುರ್ತಾಗಿ ಪ್ರಸ್ತಾವನೆ ಸಲ್ಲಿಸಲು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಪಶು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.