ಮಣಿಪಾಲ, ಜೂನ್ 21: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವತಿಯಿಂದ ಉಡುಪಿ ಕಡಿಯಾಳಿಯ ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ ಸಮಾರಂಭದಲ್ಲಿ ಮಣಿಪಾಲ ಆರೋಗ್ಯ ಕಾರ್ಡ್ ಬಿಡುಗಡೆಗೊಳಿಸಲಾಯಿತು. ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ.ಎಚ್.ಎಸ್. ಬಲ್ಲಾಳ್ ಮಾತನಾಡಿ, ಈ ವರ್ಷ ನಮ್ಮ ದೂರದೃಷ್ಟಿಯ ಸಂಸ್ಥಾಪಕ ನಾಯಕ ಡಾ. ಟಿ.ಎಂ.ಎ ಪೈ ಅವರ 125ನೇ ವರ್ಷದ ಜನ್ಮದಿನಾಚರಣೆಯನ್ನು ನಾವು ಆಚರಿಸುತ್ತಿದ್ದೇವೆ. ಅವರ ಉದಾತ್ತ ಕಾರ್ಯವನ್ನು ಸ್ಮರಿಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಭಾರತೀಯ ಆರೋಗ್ಯ ವ್ಯವಸ್ಥೆಯನ್ನು ಸಮಾಜಕ್ಕೆ ಸುಲಭವಾಗಿ ದೊರೆಯುವಂತೆ ಮಾಡಿದ ಸ್ಪೂರ್ತಿದಾಯಕ ಅಪರೂಪದ ನಾಯಕ ಡಾ. ಟಿ.ಎಂ.ಎ. ಪೈ ಎಂದು ಹೇಳಿದರು.
ಮಣಿಪಾಲ್ ಆರೋಗ್ಯ ಕಾರ್ಡ್ 2023 ನೋಂದಣಿ ಇಂದಿನಿಂದ ಆರಂಭವಾಗುತ್ತಿದೆ ಎಂದು ಘೋಷಿಸಲು ನನಗೆ ಅಪಾರ ಸಂತೋಷವಾಗುತ್ತಿದೆ. ಗುಣಮಟ್ಟದ ಆರೋಗ್ಯ ಸೇವೆಯನ್ನು ಸಾರ್ವಜನಿಕರಿಗೆ ಕೈಗೆಟಕುವಂತೆ ಮಾಡುವ ಉದ್ದೇಶದಿಂದ ಆರೋಗ್ಯ ಕಾರ್ಡ್ ಅನ್ನು ಪ್ರಾರಂಭಿಸಲಾಗಿದೆ, ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ, ಯಾರಾದರೂ ಸದಸ್ಯರಾಗಬಹುದು ಮತ್ತು ಪ್ರಯೋಜನಗಳನ್ನು ಪಡೆಯಬಹುದು ಎಂದು ಹೇಳಿದರು.
ಮಣಿಪಾಲ್ ಆರೋಗ್ಯ ಕಾರ್ಡ್ ಹೊಂದಿರುವವರಿಗೆ ತಜ್ಞ ಮತ್ತು ವಿಶೇಷ ತಜ್ಞ ವೈದ್ಯರ ಸಮಾಲೋಚನೆ ಶುಲ್ಕದಲ್ಲಿ ಶೇಕಡಾ 50 ರಿಯಾಯಿತಿ (ಒಪಿಡಿ ದಿನಗಳಂದು) ಹೊರರೋಗಿ ಪ್ರಯೋಗಾಲಯ ಪರೀಕ್ಷೆಗಳಲ್ಲಿ ಶೇಕಡಾ 30 ರಿಯಾಯಿತಿ, ಹೊರರೋಗಿ ರೇಡಿಯಾಲಜಿ ಪರೀಕ್ಷೆಗಳು (ಸಿ ಟಿ, ಎಂ ಆರ್ ಐ, ಅಲ್ಟ್ರಾಸೌಂಡ್ ಇತ್ಯಾದಿ) ಶೇಕಡಾ 20 ರಿಯಾಯಿತಿ, ಹೊರರೋಗಿ ವಿಧಾನಗಳಲ್ಲಿ ಮತ್ತು ಮಧುಮೇಹ ಪಾದ ತಪಾಸಣೆಯಲ್ಲಿ 20 ರಿಯಾಯಿತಿ, ಹೊರರೋಗಿ ಡಯಾಲಿಸಿಸ್ ₹100, ಔಷಧಾಲಯಗಳಲ್ಲಿ ಶೇಕಡಾ 12ರವರೆಗೆ ರಿಯಾಯಿತಿ, ಸಾಮಾನ್ಯ ವಾರ್ಡಿನಲ್ಲಿ ಒಳರೋಗಿಯಾದಲ್ಲಿ ಉಪಯೋಗವಾಗುವ ವಸ್ತುಗಳನ್ನು ಮತ್ತು ಪ್ಯಾಕೇಜ್‌ಗಳನ್ನು ಹೊರತುಪಡಿಸಿ ಶೇಕಡಾ 25 ರಿಯಾಯಿತಿ ದೊರೆಯಲಿದೆ.
ಒಂದು ವರ್ಷದ ಯೋಜನೆಯಲ್ಲಿ ಕಾರ್ಡಿನ ಸದಸ್ಯತ್ವವು ಒಬ್ಬರಿಗೆ ₹300/- ಕೌಟಂಬಿಕ ಕಾರ್ಡ್ ಅಂದರೆ ಕಾರ್ಡುದಾರ, ಅವರ ಸಂಗಾತಿ 25 ವರ್ಷದ ಒಳಗಿನ ಮಕ್ಕಳಿಗೆ ₹600/- ಮತ್ತು ಕುಟುಂಬ ಪ್ಲಸ್ ಯೋಜನೆ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳು ಮತ್ತು 4 ಪೋಷಕರು (ತಂದೆ, ತಾಯಿ, ಅತ್ತೆ ಮತ್ತು ಮಾವ) ₹ 750/- ಎರಡು ವರ್ಷದ ಯೋಜನೆಯಲ್ಲಿ ಒಬ್ಬರಿಗೆ ₹ 500/-, ಕುಟುಂಬಕ್ಕೆ ₹ 800/- ಮತ್ತು ಕೌಟಂಬಿಕ ಪ್ಲಸ್ ಯೋಜನೆಗೆ ₹ 950/- ಆಗಿರುತ್ತದೆ.
ಆರೋಗ್ಯಕಾರ್ಡ್‌ನ ಬೆಳೆದು ಬಂದ ರೀತಿಯ ಅವಲೋಕನ ನೀಡಿದ ಮಾಹೆ ಮಣಿಪಾಲದ ಸಹ ಕುಲಪತಿ ಡಾ. ಶರತ್ ಕುಮಾರ್ ರಾವ್ ಅವರು, ಮಾಹೆ ಮಣಿಪಾಲದ ಕುಲಪತಿ ಡಾ.ರಾಮದಾಸ್ ಪೈ ಅವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಮಣಿಪಾಲ ಆರೋಗ್ಯ ಕಾರ್ಡ್ ಅನ್ನು 2000 ರಲ್ಲಿ ಪ್ರಾರಂಭಿಸಲಾಯಿತು. ಆರೋಗ್ಯ ಸೇವೆಯನ್ನು ಉಚಿತವಾಗಿ ನೀಡಲು ಸಾಧ್ಯ ವಾಗದಿದ್ದರೂ ಎಲ್ಲರಿಗೂ ರಿಯಾಯಿತಿ ದರದಲ್ಲಿ ಲಭ್ಯವಾಗಬೇಕು ಎಂಬುದು ಇದರ ಉದ್ದೇಶವಾಗಿತ್ತು. ಆರಂಭದಲ್ಲಿ, ಈ ಯೋಜನೆಯು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭವಾಗಿ ತದನಂತರ ಇತರ ಜಿಲ್ಲೆಗಳಿಗೆ ವಿಸ್ತರಿಸಲಾಯಿತು. ಈಗ ಈ ಯೋಜನೆಯು ಉಡುಪಿ, ದಕ್ಷಿಣ ಕನ್ನಡ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಉತ್ತರ ಕನ್ನಡ, ಹಾವೇರಿ, ಚಿಕ್ಕಮಗಳೂರು ಮತ್ತು ಬಳ್ಳಾರಿ ಸೇರಿದಂತೆ ಕರಾವಳಿ ಮತ್ತು ಮಧ್ಯ ಕರ್ನಾಟಕದ ಸುಮಾರು 12-15 ಕ್ಕೂ ಹೆಚ್ಚು ಜಿಲ್ಲೆಗಳಿಗೆ ವಿಸ್ತರಿಸಿದೆ ಮತ್ತು ಹಾಗೂ ಕೇರಳ, ಗೋವಾ ಮುಂತಾದ ನೆರೆಯ ರಾಜ್ಯಗಳ ಜನರೂ ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
2019 ರಲ್ಲಿ, ಮಣಿಪಾಲ್ ಆರೋಗ್ಯ ಕಾರ್ಡ್ ಪೇಪರ್ ಮೋಡ್‌ನಿಂದ ಡಿಜಿಟಲ್ ಮೋಡ್‌ಗೆ ಸ್ಥಳಾಂತರಗೊಂಡಿತು ಮತ್ತು ಒಂದು ವರ್ಷದ ಕಾರ್ಡ್ ಜೊತೆಗೆ ಎರಡು ವರ್ಷ ಅವಧಿಯ ಕಾರ್ಡ್ ಅನ್ನು ಪರಿಚಯಿಸಲಾಯಿತು. ಮುಂಬರುವ ವರ್ಷಗಳಲ್ಲಿ ಸಂಪೂರ್ಣವಾಗಿ ಕಾರ್ಡ್ ರಹಿತ ಮತ್ತು ಗ್ರಾಹಕ ಸ್ನೇಹಿಯಾಗಿಸುವ ಗುರಿ ಹೊಂದಿದ್ದೇವೆ. ಕಳೆದ 22 ವರ್ಷಗಳಲ್ಲಿ, ಸಾಮಾಜಿಕ ಕಾಳಜಿಯೊಂದಿಗೆ ನಾವು ಲಕ್ಷಾಂತರ ಜನರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ರಿಯಾಯಿತಿ ದರದಲ್ಲಿ ಒದಗಿಸುತ್ತಿದ್ದೇವೆ ಮತ್ತು 2022 ರಲ್ಲಿ ನಾವು 6,40,000 ಸದಸ್ಯರನ್ನು ನೋಂದಾಯಿಸಿದ್ದೇವೆ. ವರ್ಷದಿಂದ ವರ್ಷಕ್ಕೆ ಸದಸ್ಯರ ನೋಂದಣಿ ಹೆಚ್ಚಾಗುತ್ತಿರುವುದು ಮಣಿಪಾಲ ಆರೋಗ್ಯಕಾರ್ಡ್‌ನ ಜನಪ್ರಿಯತೆಯನ್ನು ತೋರಿಸುತ್ತದೆ ಎಂದು ಹೇಳಿದರು.
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟಿ ಮಾತನಾಡಿ, ಮಣಿಪಾಲ ಆರೋಗ್ಯ ಕಾರ್ಡ್ ಹೊಂದಿರುವವರು ಕಸ್ತೂರ್ಬಾ ಆಸ್ಪತ್ರೆ-ಮಣಿಪಾಲ, ಡಾ.ಟಿ.ಎಂ.ಎ.ಪೈ ಆಸ್ಪತ್ರೆ-ಉಡುಪಿ, ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆ-ಕಾರ್ಕಳ, ಕೆ.ಎಂ.ಸಿ.ಆಸ್ಪತ್ರೆ-ಮಂಗಳೂರು ಮತ್ತು ಅತ್ತಾವರ, ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆ- ಕಟೀಲು ಮತ್ತು ಮಣಿಪಾಲ್ ಆಸ್ಪತ್ರೆ -ಗೋವಾ ಗಳಲ್ಲಿ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು. ಇತರ ಆಸ್ಪತ್ರೆಗಳ ರಿಯಾಯಿತಿ ಮಾದರಿಗಳನ್ನು ತಿಳಿಯಲು ಮತ್ತು ಹೆಚ್ಚಿನ ವಿವರಗಳನ್ನು http://www.manipalhealthcard.com ಗೆ ಲಾಗ್ ಇನ್ ಆಗುವುದರ ಮೂಲಕ ತಿಳಿದುಕೊಳ್ಳಬಹುದು. ಸಾರ್ವಜನಿಕರು ಮಣಿಪಾಲ್ ಆರೋಗ್ಯಕಾರ್ಡ್ ಅನ್ನು ಎಲ್ಲಾ ಅಧಿಕೃತ ಪ್ರತಿನಿಧಿಗಳಲ್ಲಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ. 9980854700/ 08202923748 ಗೆ ಸಂಪರ್ಕಿಸಬಹುದು ಎಂದು ಹೇಳಿದರು. ಕೆಎಂಸಿ ಮಣಿಪಾಲ ಡೀನ್ ಡಾ. ಪದ್ಮರಾಜ್ ಹೆಗ್ಡೆ, ಕೆಎಂಸಿ ಮಂಗಳೂರು ಡೀನ್ -ಡಾ. ಬಿ ಉನ್ನಿಕೃಷ್ಣನ್ ಉಪಸ್ಥಿತರಿದ್ದರು.