ಬ್ರಹ್ಮಾವರ, ಜೂನ್ 13: ಕಲಿಕೆಯಲ್ಲಿ ಶೃದ್ದೆ, ವೃತ್ತಿಯಲ್ಲಿ ಬದ್ಧತೆ ಇದ್ದರೆ ನಿರಂತರ ಅಭ್ಯಾಸ ಮಾಡಿದರೆ ಹೊಸತನವನ್ನು ಅಳವಡಿಸಿಕೊಂಡು ಮುಂದುವರೆಯಲು ಸಾಧ್ಯ ಎಂದು ನಿವೃತ್ತ ಪಶು ವೈದ್ಯಾಧಿಕಾರಿ ಡಾ. ಗುರುರಾಜ್ ಮನೋಳಿ ಅಭಿಪ್ರಾಯಪಟ್ಟರು. ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದ ಮಹಿಳಾ ಟೈಲರ್ ತರಬೇತಿಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಮಾಣ ಪತ್ರ ಮತ್ತು ತರಬೇತಿ ಕಿಟ್ ವಿತರಿಸಿ ಅವರು ಮಾತನಾಡಿದರು.
ತರಬೇತಿಯಲ್ಲಿ ಪಡೆದ ಹೊಸತನವನ್ನು ಅಳವಡಿಸಿಕೊಂಡು ಯಶಸ್ವಿ ಬದುಕನ್ನು ನಡೆಸಲು ಸಾಧ್ಯವಾಯಿತು ಎಂದು ಶುಭ ಹಾರೈಸಿದರು. ಮತ್ತೋರ್ವ ಅತಿಥಿ ಜಯಲಕ್ಷ್ಮಿ ಮಾತನಾಡಿ ಮಹಿಳೆಯರು ಸ್ವ ಉದ್ಯೋಗ ಮಾಡಿದರೆ ಸಂಸಾರದ ಬೆಳವಣಿಗೆಗೆ ಸಹಾಯವಾಗುತ್ತದೆ. ಬ್ಯಾಂಕ್ ಸೌಲಭ್ಯಗಳನ್ನು ಬಳಸಿಕೊಂಡು ಮುಂದುವರಿಯಿರಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಲಕ್ಷ್ಮೀಶ ಎ.ಜಿ ಮಾತನಾಡಿ, ಬ್ರಾಂಡ್ ಮಾಡಿ ವ್ಯವಹಾರ ನಡೆಸಿದರೆ ಹೆಚ್ಚಿನ ಸಂಪಾದನೆ ಮಾಡಲು ಸಾಧ್ಯ ಎಂದು ಹೇಳಿ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಗೌರವ ಉಪನ್ಯಾಸಕಿಯಾದ ಸುಮತಿ ಸುವರ್ಣ ತಮ್ಮ ತರಬೇತಿ ಅನುಭವ ಹಂಚಿಕೊಂಡರು.
ವೇದಿಕೆಯಲ್ಲಿ ಮಣಿಪಾಲ ಕೆನರಾ ಬ್ಯಾಂಕ್ ಸಿಬ್ಬಂದಿ ತರಬೇತಿ ಸಂಸ್ಥೆಯ ಮಾನ್ಯನೇಜರ್ /ಉಪನ್ಯಾಸರಾದ ದಿಲೀಪ್ ಉಪಸ್ಥಿತರಿದ್ದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ಸ್ವಾಗತಿಸಿ, ತರಬೇತಿಯ ಹಿನ್ನೋಟವನ್ನು ನೀಡಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಸಂತೋಷ ಶೆಟ್ಟಿ ವಂದಿಸಿದರು. ಶಿಬಿರಾರ್ಥಿಗಳಾದ ಆಯಿಪಾ, ಸುಜಾತ, ರತ್ನ ತಮ್ಮ ಅನುಭವ ಹಂಚಿಕೊಂಡರು. ಸಂಜನಾ ಪ್ರಾರ್ಥನೆ ನೆರವೇರಿಸಿದರು.