ಮಲ್ಪೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳ ಕಛೇರಿ ಉಡುಪಿ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಇಂದು ನಡೆಯಿತು.
ಕ್ಷಯ ನಿರ್ಮೂಲನಾಧಿಕಾರಿ ಪ್ರಶಾಂತ್ ಶೆಟ್ಟಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. 2025ರ ವೇಳೆಗೆ ಕ್ಷಯರೋಗವನ್ನು ಪೂರ್ಣ ಪ್ರಮಾಣದಲ್ಲಿ ಮುಕ್ತಗೊಳಿಸಬೇಕೆಂದು ತಿಳಿಸಿದರು.
ಕ್ಷಯ ರೋಗದ ಲಕ್ಷಣಗಳು ಮತ್ತು ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರಭಾರ ಪ್ರಾಂಶುಪಾಲ ಡಾ. ಸುರೇಶ್ ರೈ ಕೆ. ವಹಿಸಿದರು. ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ನಿರ್ದೇಶಕ ಡಾ. ರಾಮಚಂದ್ರ ಪಾಟ್ಕರ್ ನಿರೂಪಿಸಿದರು. ಸಂಖ್ಯಾಶಾಸ್ತ್ರ ವಿಭಾಗ ಮುಖ್ಯಸ್ಥ ಉಮೇಶ್ ಪೈ ಸ್ವಾಗತಿಸಿ ವಂದಿಸಿದರು.
ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಸಂಚಾಲಕ ರಾಧಾಕೃಷ್ಣ ಮತ್ತು ಡಾ. ದುಗ್ಗಪ್ಪ ಕಜೆಕಾರ್ ಹಾಗೂ ಕೆಮ್ಮಣ್ಣು ಪ್ರಾಥಮಿಕ ಆರೋಗ್ಯ ಕೇಂದ್ರ ಘಟಕದ ಕವಿತಾ, ಪ್ರಿಯಾಂಕ ರೆಬೆಲ್ಲೊ ಉಪಸ್ಥಿತರಿದ್ದರು. ಕ್ಷಯರೋಗ ನಿರ್ಮೂಲನೆಯ ಬಗ್ಗೆ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಯಿತು.