ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರ ಪಂಜಾಬ್ ಭೇಟಿಯ ಸಂದರ್ಭದಲ್ಲಿ ಭದ್ರತಾ ಲೋಪವನ್ನು ಖಂಡಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾದ ವತಿಯಿಂದ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ರಾಜ್ಯ ಸಾವಯವ ಕೃಷಿ ನಿರ್ದೇಶಕ ರಾಘವೇಂದ್ರ ಉಪ್ಪೂರು ಮಾತನಾಡಿ, ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿಯವರ ಯಶಸ್ಸಿನ ನಾಗಾಲೋಟದಿಂದ ಕಂಗೆಟ್ಟಿರುವ ಕಾಂಗ್ರೆಸ್ ಹಾಗೂ ಪ್ರಧಾನಿಯವರನ್ನು ನೇರವಾಗಿ ಎದುರಿಸಲಾಗದೇ ಭದ್ರತಾ ವೈಫಲ್ಯವೆಸಗಿರುವ ಕಾಂಗ್ರೆಸ್ ಆಡಳಿತದ ಪಂಜಾಬ್ ಮುಖ್ಯಮಂತ್ರಿಯ ಕುಕೃತ್ಯ ಖಂಡನೀಯ.
ದೇಶದ ಪ್ರಧಾನಿಗೆ ಭದ್ರತೆ ನೀಡದೆ ರೈತ ಪ್ರತಿಭಟನೆಯ ನೆಪದಲ್ಲಿ ಸಂಚಾರಕ್ಕೆ ತಡೆಯೊಡ್ಡಿ ಪ್ರಧಾನಿ ಮೋದಿಯವರು 20 ನಿಮಿಷ ರಸ್ತೆ ನಡುವೆ ಕಾರಿನಲ್ಲೇ ಕಾಯುವಂತೆ ಮಾಡಿರುವ ವಿಲಕ್ಷಣ ಘಟನೆ ದೇಶದ ಇತಿಹಾಸದಲ್ಲೇ ಒಂದು ಕಪ್ಪು ಚುಕ್ಕೆಯಾಗಿದೆ.
ಸಾಂವಿಧಾನಿಕ ಹುದ್ದೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಅವಮಾನಕಾರಿಯಾಗಿ ನಡೆಸಿಕೊಂಡು, ಭದ್ರತಾ ವೈಫಲ್ಯದೊಂದಿಗೆ ಸಂವಿಧಾನ ವಿರೋಧಿ ನಡೆ ಪ್ರದರ್ಶಿಸಿರುವ ಪಂಜಾಬ್ ಸರಕಾರವನ್ನು ಕೂಡಲೇ ವಜಾಗೊಳಿಸಿ ರಾಷ್ಟ್ರಪತಿ ಆಡಳಿತವನ್ನು ಹೇರಬೇಕು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿ ಅಮೀನ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಧೀರಜ್ ಕೆ.ಎಸ್., ಗೋಪಾಲ್ ಕಾಂಚನ್, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ, ಐ.ಬಿ. ಅಶೋಕ್ ಶೆಟ್ಟಿ, ಸುರೇಂದ್ರ ಬೋಂಟ್ರ ಮುನಿಯಾಲು, ರೈತ ಮೋರ್ಚಾ ಮಂಡಲ ಅಧ್ಯಕ್ಷರಾದ ಸುಧಾಕರ ಕುಲಾಲ್ ಬೈಂದೂರು, ರಾಘವೇಂದ್ರ ನಾಯಕ್ ಉಡುಪಿ ನಗರ, ಪ್ರವೀಣ್ ಕುಮಾರ್ ಉಪ್ಪೂರು ಉಡುಪಿ ಗ್ರಾಮಾಂತರ, ಗುರುನಂದನ್ ನಾಯಕ್ ಕಾಪು, ಜಿಲ್ಲಾ ರೈತ ಮೋರ್ಚಾ ಪದಾಧಿಕಾರಿಗಳು, ರೈತ ಮೋರ್ಚಾ ಮಂಡಲಗಳ ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಎಫ್ ಪಿ ಒ ಸಂಚಾಲಕ ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.