ಉಡುಪಿ: ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನ ಸೆ.17ರಂದು ಚಾಲನೆಗೊಂಡು ಅವರು ಚುನಾಯಿತ ಸರಕಾರದ ನೇತೃತ್ವವನ್ನು ವಹಿಸಿ 20 ವರ್ಷಗಳು ತುಂಬಿರುವ ದಿನ ಅ.7ರ ವರೆಗೆ ಉಡುಪಿ ಜಿಲ್ಲೆಯಾದ್ಯಂತ 20 ದಿನಗಳ ಪರ್ಯಂತ ನಡೆದ ಸೇವೆ ಮತ್ತು ಸಮರ್ಪಣ ಅಭಿಯಾನವು ಯಶಸ್ಸಿನ ಪಥದಲ್ಲಿ ಸಾಗಿ ಸಾರ್ಥಕ ಸೇವಾ ಕಾರ್ಯಗಳ ಮೂಲಕ ಹೊಸ ಭಾಷ್ಯ ಬರೆದಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಸೇವೆ ಮತ್ತು ಸಮರ್ಪಣ ಅಭಿಯಾನದ ಸಮಾರೋಪ ಸಭೆಯ ಅಧ್ಯಕ್ಷತೆ ವಹಿಸಿ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಸೇವೆಗೆ ಇನ್ನೊಂದು ಹೆಸರು ಬಿಜೆಪಿ ಎನ್ನುವ ರೀತಿಯಲ್ಲಿ ಸೇವೆ ಮತ್ತು ಸಮರ್ಪಣ ಅಭಿಯಾನವು ಎಲ್ಲರ ಸಂಘಟಿತ ಪ್ರಯತ್ನದ ಫಲವಾಗಿ ನಿಗದಿತ 9 ವಿಧದ ಸೇವಾ ಚಟುವಟಿಕೆಗಳಡಿಯಲ್ಲಿ ಗರಿಷ್ಠ ಜನಸೇವಾ ಕಾರ್ಯಗಳೊಂದಿಗೆ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ.
ಈ ವಿನೂತನ ಅಭಿಯಾನದಲ್ಲಿ ಕ್ರಿಯಾಶೀಲತೆ ಮತ್ತು ಬದ್ಧತೆಯಿಂದ ತೊಡಗಿಸಿಕೊಂಡು ಅಭಿಯಾನವನ್ನು ಜಿಲ್ಲೆಯಾದ್ಯಂತ ಪರಿಣಾಮಕಾರಿಯಾಗಿ ಆಯೋಜಿಸಲು ಶ್ರಮ ವಹಿಸಿರುವ ಅಭಿಯಾನದ ಜಿಲ್ಲಾ ಸಂಚಾಲಕರು, ಜಿಲ್ಲಾ ಮತ್ತು ಮಂಡಲಗಳ 9 ಕಾರ್ಯಕ್ರಮಗಳ ಸಂಚಾಲಕರು, ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲಗಳ ಸಹಿತ ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳ ಸಮರ್ಪಣಾಭಾವದ ಸೇವೆ ಅಭಿನಂದನೀಯ ಎಂದು ಕುಯಿಲಾಡಿ ಹೇಳಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಮಾತನಾಡಿ, 20 ದಿನಗಳ ಪರ್ಯಂತ ನಡೆದ ಸೇವೆಯೆಂಬ ಯಜ್ಞವು ನವರಾತ್ರಿಯ ಪರ್ವ ಕಾಲದಲ್ಲಿ ಸಮರ್ಪಣೆಯಾಗುತ್ತಿರುವುದು ಬಹಳ ಅರ್ಥಪೂರ್ಣವಾಗಿದೆ. ಸೇವೆ ಮತ್ತು ಸಮರ್ಪಣ ಅಭಿಯಾನದಲ್ಲಿ ಪಾಲ್ಗೊಂಡ ಎಲ್ಲರಿಗೂ ಅಭಿನಂದನೆಗಳು ಎಂದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಬಿಜೆಪಿ ಪಕ್ಷ ಸಂಘಟನೆಯ ಜೊತೆಗೆ ಸೇವಾ ಪರ್ವದ ವಿನೂತನ ಅವಕಾಶವನ್ನು ನೀಡಿದೆ. ವಿದ್ಯೆಯೊಂದಿಗೆ ಸಂಸ್ಕಾರವನ್ನು ಜೋಡಿಸುವ ನಿಟ್ಟಿನಲ್ಲಿ ಪಕ್ಷವು ಸೇವೆ ಮತ್ತು ಸಮರ್ಪಣ ಅಭಿಯಾನದಡಿ ವಿಶೇಷ ಕಾರ್ಯಕ್ರಮಗಳನ್ನು ನೀಡಿದೆ. ಸ್ವಚ್ಛತೆಯಂತಹ ಪ್ರಕ್ರಿಯೆಗಳು ನಮ್ಮ ಸ್ವಯಂ ಕ್ಷೇತ್ರಗಳಲ್ಲಿ ಅನುಷ್ಠಾನವಾಗಬೇಕಿದೆ. ಈ ಅಭಿಯಾನವನ್ನು ಯಶಸ್ವಿಗೊಳಿಸಿದ ಎಲ್ಲರೂ ಅಭಿನಂದನಾರ್ಹರು ಎಂದರು.
ಬಿಜೆಪಿ ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್ ಮಾತನಾಡಿ, ನಡೆ ನುಡಿ ಕಾರ್ಯಗಳಲ್ಲಿ ಸಾಮ್ಯತೆ ಹೊಂದಿರುವ ಪ್ರಧಾನಿ ಮೋದಿಯವರ ಸೇವಾ ತತ್ಪರತೆ ಅನುಕರಣೀಯ. ಪಂಡಿತ್ ದೀನದಯಾಳ್ ಉಪಾಧ್ಯಾಯರವರ ತತ್ವ ಸಿದ್ಧಾಂತ, ಸಂಘಟನೆಗಾಗಿ ಸಮರ್ಪಿತಗೊಂಡ ಬದುಕಿನ ವಿಚಾರಧಾರೆ ಸ್ಮರಣೀಯ. ಮಹಾತ್ಮಾ ಗಾಂಧಿಯವರ ಸ್ವದೇಶಿ ಚಿಂತನೆ, ಸ್ವಚ್ಛತೆ, ಸೇವಾ ಮನೋಭಾವ ಅದರ್ಶಪೂರ್ಣ.
ಈ ಎಲ್ಲಾ ಸದ್ವಿಚಾರಗಳಿಗೆ ಒತ್ತು ನೀಡಿರುವ ಪಕ್ಷದ ಅತೀ ದೊಡ್ಡ ಅಭಿಯಾನ ಎಂದೆನಿಸಿರುವ ಸೇವೆ ಮತ್ತು ಸಮರ್ಪಣ ಅಭಿಯಾನವು ಉಡುಪಿ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿರುವುದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ, ಜಿಲ್ಲಾ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠ ಹಾಗೂ ಜಿಲ್ಲಾ ಮಹಿಳಾ ಮೋರ್ಚಾ ಮತ್ತು ಯುವ ಮೋರ್ಚಾ ಸಂಯೋಜನೆಯಲ್ಲಿ ಹಿರಿಯ ಯಕ್ಷಗಾನ ವಿದ್ವಾಂಸ ಮತ್ತು ಮದ್ದಳೆ ವಾದಕ ಬಾಲಕೃಷ್ಣ ಬಿರ್ತಿಯವರನ್ನು ಸನ್ಮಾನಿಸಲಾಯಿತು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಅಭಿಯಾನದ ಜಿಲ್ಲಾ ಸಂಚಾಲಕ ಸದಾನಂದ ಉಪ್ಪಿನಕುದ್ರು ಸ್ವಾಗತಿಸಿದರು. ಜಿಲ್ಲಾ ಸಹ ವಕ್ತಾರ ಹಾಗೂ ಅಭಿಯಾನದ ಜಿಲ್ಲಾ ಸಹ ಸಂಚಾಲಕ ಶಿವಕುಮಾರ್ ಅಂಬಲಪಾಡಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ಸಂಚಾಲಕ ಗಣೇಶ್ ಬ್ರಹ್ಮಾವರ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಸುರೇಂದ್ರ ಪಣಿಯೂರು ನೇತೃತ್ವದ ಹಿಮ್ಮೇಳ ಮತ್ತು ನುರಿತ ಅತಿಥಿ ಕಲಾವಿದರ ತಂಡದಿಂದ ಭೀಷ್ಮ ವಿಜಯ ಯಕ್ಷಗಾನ ತಾಳ ಮದ್ದಳೆ ಪ್ರದರ್ಶನಗೊಂಡಿತು.